ಕರ್ನಾಟಕವನ್ನು ಸಮೃದ್ಧವಾಗಿಸಲು ಒಟ್ಟಾಗಿ ಶ್ರಮಿಸೋಣ: ರಾಜ್ಯಪಾಲ ಗೆಹ್ಲೋಟ್
ಬೆಂಗಳೂರು : ಕರ್ನಾಟಕ ರಾಜ್ಯವನ್ನು ಆರೋಗ್ಯಕರ ಮತ್ತು ಸಮೃದ್ಧವಾಗಿಸಲು ಮತ್ತು ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಶುಕ್ರವಾರ ನಗರದ ರಾಜಭವನದ ಸಭಾಂಗಣದಲ್ಲಿ ರಾಜಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವರ್ಚವಲ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಸುವ್ಯವಸ್ಥಿತ ಮತ್ತು ಸಮೃದ್ಧ ರಾಜ್ಯವಾಗಿದೆ. ಇಲ್ಲಿನ ವ್ಯಾಪಾರ ದೃಷ್ಟಿಕೋನ, ಸರಕಾರ ಮತ್ತು ದಕ್ಷ ಆಡಳಿತವು ರಾಜ್ಯಕ್ಕೆ ವಿಶೇಷ ಗುರುತನ್ನು ನೀಡಿದೆ ಎಂದರು.
ನವೆಂಬರ್ 1ರಂದು ಕರ್ನಾಟಕ ರಾಜ್ಯವು ಸೇರಿ ಆಂಧ್ರಪ್ರದೇಶ, ಛತ್ತೀಸ್‍ಗಢ, ಹರಿಯಾಣ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ಪಂಜಾಬ್ ಮತ್ತು 5 ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಢ, ಹೊಸದಿಲ್ಲಿ, ಲಕ್ಷದ್ವೀಪಗಳ, ಪುದುಚೇರಿಯ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಅಡಿಯಲ್ಲಿ ರಾಜಭವನದಲ್ಲಿ ಇದು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯಗಳ ಸಂಸ್ಥಾಪನಾ ದಿನವು ರಾಜ್ಯದ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ. ನಮ್ಮ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಸಂಪ್ರದಾಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಮ್ಮ ರಾಜ್ಯದ ಸಾಧನೆಗಳನ್ನು ಗೌರವಿಸಲು ಇದು ಒಂದು ಅವಕಾಶ ಎಂದು ರಾಜ್ಯಪಾಲರು ತಿಳಿಸಿದರು.
ರಾಜಭವನಗಳಲ್ಲಿ ‘ಏಕ್ ಭಾರತ್-ಶ್ರೇಷ್ಠ ಭಾರತ್’ ಸಿದ್ಧಾಂತದಿಂದ ಪ್ರೇರಿತವಾದ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯ ಭಾವನೆಯನ್ನು ಹೆಚ್ಚಿಸುತ್ತಿವೆ. ಈ ಯೋಜನೆಯನ್ನು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದರು.
ಕರ್ನಾಟಕ ರಾಜ್ಯವು ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ, ಈ ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ದೇವಾಲಯಗಳು ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿಯಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.
ಕರ್ನಾಟಕ ರಾಜ್ಯವು ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಗಣನೀಯ ಕೊಡುಗೆ ನೀಡಿದೆ. ನಮ್ಮ ದೇಶದ ಆರ್ಥಿಕತೆಯು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಮುಂದಿನ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ತರುವ ಸಂಕಲ್ಪವಿದೆ. 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ ನಮ್ಮ ಜವಾಬ್ದಾರಿಯಾಗಿದೆ. ಈ ನಿರ್ಣಯಕ್ಕೆ ಬದ್ಧರಾಗುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡೋಣ ಎಂದು ರಾಜ್ಯಪಾಲರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಚುಟುವಟಿಕೆಗಳು ಜರುಗಿದವು. ರಾಜಭವನದ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಸೇರಿ ಹಲವರು ಉಪಸ್ಥಿತರಿದ್ದರು.