ಫೆಲೆಸ್ತೀನ್ ಸಹಾನುಭೂತಿ ಒಕ್ಕೂಟದಿಂದ ಮುಖ್ಯಮಂತ್ರಿಗೆ ಬಹಿರಂಗ ಪತ್ರ
ಬೆಂಗಳೂರು: ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣ ವಿರೋಧಿಸಿ ನಡೆಸುವ ಪ್ರತಿಭಟನೆ ಹಾಗೂ ಫೆಲೆಸ್ತೀನ್ ಗೆ ಬೆಂಬಲ ವ್ಯಕ್ತಪಡಿಸುವುದಕ್ಕೆ ರಾಜ್ಯ ಸರಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ʼಕರ್ನಾಟಕದ ಸಂಘಟನೆಗಳ ಮತ್ತು ಧಾರ್ಮಿಕ ನೇತಾರರ ಫೆಲೆಸ್ತೀನ್ ಸಹಾನುಭೂತಿ ಒಕ್ಕೂಟʼ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದೆ.
ಮುಖ್ಯಮಂತ್ರಿಗೆ ಬರೆದ ಪತ್ರದ ಸಾರಾಂಶ ಇಲ್ಲಿದೆ:
ಕಳೆದ ಐದು ವಾರಗಳಿಂದ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಿಂದ 13,000 ಫೇಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. 30,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರು ತಮ್ಮ ಸ್ವಂತ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ. ಅರ್ಧದಷ್ಟು ಕಟ್ಟಡಗಳು ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿವೆ. ಮಸೀದಿಗಳು, ಶಾಲೆಗಳು, ಚರ್ಚ್‍ಗಳು, ಆಸ್ಪತ್ರೆಗಳು ಮತ್ತು ನಿರಾಶ್ರಿತರ ಶಿಬಿರಗಳನ್ನೂ ಕ್ರೂರವಾಗಿ ನಾಶಪಡಿಸಲಾಗಿದೆ. ಆಹಾರ, ನೀರು, ವಿದ್ಯುತ್, ಔಷಧಗಳು, ಅಗತ್ಯ ವಸ್ತುಗಳು ಮತ್ತು ಇಂಧನವನ್ನು ನಿರ್ಬಂಧಿಸಲಾಗಿದೆ.
ಇಸ್ರೇಲ್‍ನ ನರಮೇಧ, ಬಲವಂತದ ಪುನರ್ವಸತಿ, ಫೆಲೆಸ್ತೀನಿಯರನ್ನು ಅವರ ಭೂಮಿ ಮತ್ತು ಮನೆಗಳಿಂದ ಹೊರಹಾಕುವ ಅಭಿಯಾನವು ಕಳೆದ 75 ವರ್ಷಗಳಿಂದ ಮುಂದುವರೆದಿದೆ. ಅ. 7ರ ದಾಳಿಯನ್ನು ನೆಪವಾಗಿಸಿಕೊಂಡು, ಇಸ್ರೇಲ್ ತನ್ನ ನೀಚ ವಿಸ್ತರಣಾ ಮಹತ್ವಾಕಾಂಕ್ಷೆಗಳನ್ನು ಅನುಸರಿಸುತ್ತಿದೆ. ಮಾನವೀಯತೆ, ಕಾನೂನು ಮತ್ತು ನಾಗರಿಕತೆಯನ್ನು ನಿಕೃಷ್ಟವಾಗಿ ಉಲ್ಲಂಘಿಸಲಾಗಿದೆ. ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಕಾನೂನು, ನಿಯಮಗಳು ಹಾಗೂ ಒಪ್ಪಂದಗಳ ಅಡಿಪಾಯಗಳು ಛಿದ್ರಗೊಂಡಿವೆ. ಈ ಯುದ್ಧಾಪರಾಧಗಳ ಮುಂದೆ ವಿಶ್ವದ ಅಸಹಾಯಕತೆ, ಆಡಳಿತಗಾರರ ಮೌನ ಮತ್ತು ಕೆಲವು ದೊಡ್ಡ ದೇಶಗಳ ಬೆಂಬಲ, ಸಹಾಯ ಮತ್ತು ಪ್ರೋತ್ಸಾಹವು ಅತ್ಯಂತ ಕಳವಳ ಮತ್ತು ಆತಂಕಕ್ಕೆ ಕಾರಣವಾಗಿದೆ.
ಈ ಘಟನೆಗಳ ವಿರುದ್ಧ ವಿಶ್ವದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ನ್ಯಾಯವನ್ನು ಪ್ರೀತಿಸುವ ಜನರು ದಮನಕಾರರ ವಿರುದ್ಧ ಮತ್ತು ದಮನಿತರ ಪರವಾಗಿ ತಮ್ಮ ಭಾವನೆಗಳನ್ನು ಎಲ್ಲೆಡೆ ವ್ಯಕ್ತಪಡಿಸುತ್ತಿದ್ದಾರೆ. ಇದು ನಮ್ಮ ನೈತಿಕತೆ ಮತ್ತು ಮಾನವೀಯತೆಯ ಕನಿಷ್ಠ ಬೇಡಿಕೆಯಾಗಿದೆ. ನಮ್ಮ ದೇಶದಲ್ಲಿ ಮತ್ತು ಕಾಂಗ್ರೆಸ್ ಸರ್ಕಾರವಿರುವ ನಮ್ಮ ರಾಜ್ಯದಲ್ಲಿ ಈ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಅಡ್ಡಿಯಾಗುತ್ತಿರುವುದು ಖಂಡನೀಯ. ಮೌನ ಪ್ರತಿಭಟನೆಯ ಪ್ರಯತ್ನಗಳ ವಿರುದ್ಧ ಎಫ್‍ಐಆರ್‍ಗಳನ್ನು ಸಹ ದಾಖಲಿಸಲಾಗಿದೆ ಮತ್ತು ಒಳಾಂಗಣ ಸಭೆಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಸಂಘಟನೆಗಳು, ವಿದ್ವಾಂಸರು ಮತ್ತು ಇತರ ಎನ್‍ಜಿಒಗಳ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮನವಿಗೂ ಯಾವೂದೇ ಸ್ಪಂದನೆ ದೊರಕಿಲ್ಲ.
ನಮ್ಮ ಪ್ರಜಾಸತ್ತಾತ್ಮಕ ಮತ್ತು ಮೂಲಭೂತ ಹಕ್ಕುಗಳನ್ನು ಈ ರೀತಿ ನಿರ್ಬಂಧಿಸಬಾರದು ಎಂದು ಮುಖ್ಯಮಂತ್ರಿಗಳನ್ನು ಈ ಬಹಿರಂಗ ಪತ್ರದ ಮೂಲಕ ವಿನಂತಿಸುತ್ತೇವೆ. ಮಾತುಕತೆ ಮತ್ತು ಸಮಾಲೊಚನೆಗಳಿಗೆ ಅವಕಾಶಗಳನ್ನೊದಗಿಸಬೇಕು. ಈ ಸಂಬಂಧ ದೂರು ದಾಖಲಿಸಿರುವುದನ್ನು ಹಿಂಪಡೆಯಲು ಆದೇಶ ಹೊರಡಿಸಬೇಕು.
ಫೆಲೆಸ್ತೀನ್ ರಾಜ್ಯ ಸ್ಥಾಪನೆಯನ್ನು ಬೆಂಬಲಿಸುವ ಮತ್ತು ವಸಾಹತುಶಾಹಿಯನ್ನು ವಿರೋಧಿಸುವ ಭಾರತ ಸರ್ಕಾರದ ದೀರ್ಘಕಾಲದ ನೀತಿಯನ್ನು ಮತ್ತು ಪೀಡಿತರಿಗೆ ಪರಿಹಾರ ಒದಗಿಸುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ.
ನಮ್ಮ ಭಾವನೆಗಳನ್ನು ಭಾರತ ಸರ್ಕಾರಕ್ಕೋ ತಿಳಿಸಲು ವಿನಂತಿಸುತ್ತೇವೆ. ಎಲ್ಲಿ ನ್ಯಾಯ ಮತ್ತು ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೋ, ಅದು ನಮ್ಮ ದೇಶದಲ್ಲಾಗಲಿ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಾಗಲಿ ನಾವು ಯಾವಾಗಲೂ ಸತ್ಯ ಮತ್ತು ನ್ಯಾಯದ ಪರವಾಗಿರಬೇಕು ಹಾಗೂ ದಮನಿತರಿಗೆ ಮತ್ತು ಪೀಡಿತರಿಗೆ ಸಹಾಯ ಮಾಡಬೇಕು.
ಮೌಲಾನ ವಹಿದುದ್ದೀನ್ ಖಾನ್ ಉಮರಿ ಮದನಿ
ಸಂಚಾಲಕರು