ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಡಿಜಿಪಿಗೆ ಮಹಿಳಾ ಕಾಂಗ್ರೆಸ್ ದೂರು
ಬೆಂಗಳೂರು : ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ದೌರ್ಜನ್ಯವೆಸಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರವಿವಾರ ನಗರದ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿ, ದೂರು ನೀಡಿದ್ದಾರೆ.
ಪ್ರತಿಭಟನಾ ವೇಳೆಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್, ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. 2 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆಂದು ಅದರಲ್ಲಿನ ಕೆಲವು ವಿಡಿಯೋಗಳನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಚಿತ್ರೀಕರಣಗಳು ತಮ್ಮ ಬಳಿ ಇದೆ. ಅನೇಕ ಮಹಿಳೆಯರಿಗೆ ವಂಚಿಸಿ ಬೆದರಿಕೆ ಹಾಕಿ ಮಾಡಿರುವ ಅತ್ಯಾಚಾರಗಳ ದಾಖಲೆ ತನ್ನ ಬಳಿ ಇದ್ದು ಮಾಧ್ಯಮಗಳಲ್ಲಿ ಬಹಿರಂಗಪಡಿಸಲು ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಸವಾಲು ಹಾಕಿದ್ದರು. ಇಂತಹ ಗಂಭೀರ ಆರೋಪ ಇರುವ ಕಾರಣ ಎನ್‍ಡಿಎ ಮೈತ್ರಿಕೂಟದಿಂದ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಬಿಜೆಪಿ ಪ್ರಮುಖರಿಗೆ ಪತ್ರ ಬರೆದಿದ್ದರು. ಆದರೂ, ಮೈತ್ರಿ ಪಕ್ಷಗಳು ಟಿಕೆಟ್ ಕೊಟ್ಟಿದ್ದು ನಾಚಿಕೆಗೇಡಿನ ಸಂಗತಿ ಎಂದು ಪುಷ್ಪ ಅಮರನಾಥ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿರುವ ವಿಡಿಯೋದಲ್ಲಿ ಕೆಲವು ಮಹಿಳೆಯರು ನಿರಾಕರಿಸಿದರು ಕೂಡ ಬಲವಂತವಾಗಿ ಅವರ ಮೇಲೆ ಅತ್ಯಾಚಾರ ಮಾಡಿರುವುದು ಕಂಡು ಬಂದಿದೆ. ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಜೀವ ಬೆದರಿಕೆ ಒಡ್ಡಿ ಸಾವಿರಾರು ಮಹಿಳೆಯರಿಗೆ ಅತ್ಯಾಚಾರ ಮಾಡಿರುವುದು ಮತ್ತು ಅವರು ಯಾರು ಕೂಡ ಇವರ ವಿರುದ್ಧ ದೂರು ನೀಡದಂತೆ ಎಲ್ಲಾ ರೀತಿಯ ಬೆದರಿಕೆ ಹಾಕಿದ ಬಗ್ಗೆ ಹಾಸನ ಜಿಲ್ಲೆಯಲ್ಲಿ ಮಾತಾಗಿದೆ. ಈ ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ಮತ್ತು ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪುಷ್ಪ ಅಮರನಾಥ್ ಒತ್ತಾಯಿಸಿದ್ದಾರೆ.
ನೂರಾರು ಕಾಂಗ್ರೆಸ್ ಕಾರ್ಯಕರ್ತೆಯರು ಭಾಗಿಯಾಗಿ ಸಂಸದ ಪ್ರಜ್ವಲ್ ಬಂಧಿಸುವಂತೆ ಘೋಷಣೆ ಕೂಗಿದರು.