ಬಿಜೆಪಿಯ ಎಲ್ಲ ಹಗರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-09-02 15:49 GMT

ಬೆಂಗಳೂರು : ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ 21 ಹಗರಣಗಳ ಪೈಕಿ ಕೋವಿಡ್ ಹಗರಣದ ತನಿಖಾ ವರದಿ ಪಡೆದುಕೊಂಡಿರುವುದು ಕೇವಲ ಟ್ರೈಲರ್ ಆಗಿದ್ದು, ಬಿಜೆಪಿ ಸರಕಾರದ ಎಲ್ಲ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಏಜೆನ್ಸಿಗಳು ಬಂದು ಕೈಯಾಡಿಸುತ್ತಿವೆ. ಕಾನೂನಾತ್ಮಕವಾಗಿ ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿಯವರಿಗೂ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ನ್ಯಾಯಮೂರ್ತಿ ಡಿ ಕುನ್ಹಾ ಆಯೋಗ ನೀಡಿದೆ. ಮೇಲ್ನೋಟಕ್ಕೆ ಬಹಳಷ್ಟು ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದು ವರದಿಯಲ್ಲಿದೆ. ಅಧಿಕಾರಿಗಳಿಂದಲೂ ಲೋಪ ಆಗಿದೆ. ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಇದೆ. ವರದಿ ತಯಾರಿಸಿದವರು ಕೆಲ ವಿಷಯವನ್ನು ಸಹಜವಾಗಿ ಹೇಳಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಮಾಹಿತಿ ಅಧಿಕೃತವಾಗಿ ತಿಳಿದಿಲ್ಲ. ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟಾಗ ಎಲ್ಲ ಗೊತ್ತಾಗಲಿದೆ ಎಂದರು.

ಒತ್ತಡ ಹಾಕಿ ತನಿಖಾ ವರದಿ ತರಿಸಿಕೊಳ್ಳುವುದರಲ್ಲಿ ತಪ್ಪೇನಿದೆ. ತನಿಖಾ ಸಂಸ್ಥೆಗಳಿಗೆ ಬೇಗ ತನಿಖೆ ಮುಗಿಸಿ ಎಂದು ಹೇಳಿದರೆ ತಪ್ಪೇನು. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಯಾರೊ ವಿಡಿಯೊ ಇದೆ ಎಂದಾಕ್ಷಣ ಯಾಕೆ ತಡೆಯಾಜ್ಞೆ ತರುತ್ತಾರೆ. ವರದಿ ಬಂದ ತಕ್ಷಣ ಕಾನೂನು ಹೋರಾಟ ಮಾಡುತ್ತೇವೆ ಎಂದು ಯಾಕೆ ಹೇಳುತ್ತಾರೆ ಎಂದು ಸಚಿವರು ವ್ಯಂಗ್ಯವಾಡಿದರು.

ಅಷ್ಟಕ್ಕೂ ನಾವು ಮಧ್ಯಂತರ ವರದಿ ಕೊಡಿ ಎಂದು ತನಿಖಾ ಆಯೋಗಕ್ಕೆ ಒತ್ತಡ ಹಾಕಿಲ್ಲ. ನಾವು ಮಾಜಿ ಮುಖ್ಯಮಂತ್ರಿ, ಸಚಿವರ ಹೆಸರು ಹೇಳಿದ್ದೇವೆಯೇ? ವರದಿಯಲ್ಲಿ ಏನಿದೆ ಎಂದು ನಮಗೆ ಗೊತ್ತಿಲ್ಲ. ಏನಿದೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News