ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಹಣ ನೀಡಿರುವುದು ಆಶಾದಾಯಕ: ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು: ಆಯವ್ಯಯದಲ್ಲಿ ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚಿನ ಹಣ ನೀಡಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ. ಎಲ್ಲಾ ಕನ್ನಡಿಗರು ಸ್ವಾಗತಿಸಬೇಕಾದ ಆಯವ್ಯಯ ಇದಾಗಿದೆ ಎಂದು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಹಿಂದಿನ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ, ಬರೋಬರಿ 6,835 ಕೋಟಿ ರೂ.ಗಳ ಹೆಚ್ಚಿನ ಮೊತ್ತವನ್ನು ಮೀಸಲಿರಿಸಲಾಗಿದೆ. ಶೇಕಡವಾರು ಲೆಕ್ಕದಲ್ಲಿ ಶೇಕಡ 18.18 ರಷ್ಟು ಹೆಚ್ಚಳವಾಗಿದೆ. ಒಟ್ಟು ಆಯವ್ಯಯದಲ್ಲಿ ಶಿಕ್ಷಣಕ್ಕೆ ಶೇಕಡ 12ರಷ್ಟನ್ನು ಮೀಸಲಿಡಲಾಗಿದ್ದು, ಒಟ್ಟು ಆಯವ್ಯಯದಲ್ಲಿ ಶೇಕಡ ಒಂದರಷ್ಟರ ಹೆಚ್ಚಳ ನಿರ್ಣಾಯಕ ಹೆಚ್ಚಳವಾಗಿದೆ ಎಂದಿದ್ದಾರೆ.
ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಅವರ ಹಿಂದಿನ ಅವಧಿಯಲ್ಲಿ ರೂಪಿಸಿದ್ದ ಸರಕಾರಿ ಶಾಲೆಗಳ ಸಬಲೀಕರಣ ವರದಿ 2017ನ್ನು ಸದನದಲ್ಲಿ ಮಂಡಿಸಿ ಜಾರಿಗೊಳಿಸುವ ಬಗ್ಗೆ ಮತ್ತು ಅದಕ್ಕಾಗಿ ಸರಕಾರಿ ಶಾಲೆಗಳ ಸಬಲೀಕರಣ ಪ್ರಾಧಿಕಾರ ರಚನೆಗೆ ಒತ್ತು ನೀಡಬೇಕಿತ್ತು. ಜೊತೆಗೆ, ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಖಾಸಗಿ ಶಾಲೆಗಳಲ್ಲಿ ಪ್ರವೇಶ, ಶುಲ್ಕ ನಿಯಂತ್ರಣ ಮತ್ತು ಉತ್ತಮ ಆಡಳಿತದಲ್ಲಿ ಪಾಲಕರ ಭಾಗವಹಿಸುವಿಕೆಗೆ ಸೂಕ್ತ ಕಾನೂನು ಜಾರಿಗೊಳಿಸುವ ಭರವಸೆ ಬೇಕಿತ್ತು ಎಂದು ಅವರು ತಿಳಿಸಿದ್ದಾರೆ.