ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಹನಿಟ್ರ್ಯಾಪ್ ಆರೋಪ
ಬೆಂಗಳೂರು : ಇತ್ತೀಚೆಗಷ್ಟೇ ಹನಿಟ್ರ್ಯಾಪ್, ಜಾತಿನಿಂದನೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರ್.ಆರ್.ನಗರ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ಹಾಗೂ ಅವರ ಪತಿ ಮುನಿರತ್ನ ವಿರುದ್ಧ ಹನಿಟ್ರ್ಯಾಪ್, ಕೊಲೆ ಯತ್ನದ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ಲಗ್ಗೆರೆಯ ಮಾಜಿ ಕಾರ್ಪೋರೇಟರ್ ಹಾಗೂ ಅವರ ಪತಿ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಹೊಟೇಲ್ ಒಂದರಲ್ಲಿ ಸುದ್ದಿಗೊಷ್ಠಿ ನಡೆಸಿದ ಅವರು, ಮುನಿರತ್ನ ತಮ್ಮ ಕುಟುಂಬಕ್ಕೆ ನೀಡಿರುವ ಕಿರುಕುಳದ ಬಗ್ಗೆ ಸಾಕ್ಷಿ ಸಮೇತ ಅಳಲು ತೋಡಿಕೊಂಡಿದ್ದಾರೆ.
ಶನಿವಾರವಷ್ಟೇ ನಂದಿನಿ ಲೇಔಟ್ನಲ್ಲಿ ಮುನಿರತ್ನ ವಿರುದ್ಧ ದಂಪತಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಇದೀಗ ದಂಪತಿ ಸುದ್ದಿಗೋಷ್ಠಿ ನಡೆಸಿ ಶಾಸಕ ಮುನಿರತ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
ಆರೋಪ ಏನು?:
ಮುನಿರತ್ನ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ನನ್ನ ಬಳಿ ಇದಕ್ಕೆ ಬೇಕಾದ ಆಡಿಯೋ, ವೀಡಿಯೋ ದಾಖಲೆ ಇದೆ. ನನ್ನ ಅಶ್ಲೀಲ ವೀಡಿಯೋ ಮಾಡಲು ಮುನಿರತ್ನ ಷಡ್ಯಂತ್ರ ಮಾಡಿದ್ದರು. ಕೊನೆಗೆ ನಾನು ನನ್ನ ಹೆಂಡತಿ ಇರುವುದನ್ನು ಚಿತ್ರೀಕರಿಸಲು ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಪ್ರಯತ್ನ ಪಟ್ಟಿದ್ದರು ಎಂದು ಮುನಿರತ್ನ ವಿರುದ್ಧ ಸಂತ್ರಸ್ತೆಯ ಪತಿ ಆರೋಪ ಮಾಡಿದ್ದಾರೆ.
ಮುನಿರತ್ನ ದೊಡ್ಡ ದೊಡ್ಡವರನ್ನು ಇದೇ ರೀತಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಎಸ್ಐಟಿಗೆ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಮುನಿರತ್ನ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.