ಇಸ್ರೇಲ್-ಫೆಲೆಸ್ತೀನ್ ಯುದ್ಧ ನಿಲ್ಲಿಸುವ ಶಕ್ತಿ ಇಂದಿರಾಗಾಂಧಿ ಅವರಲ್ಲಿತ್ತು : ಎಂ.ವೀರಪ್ಪ ಮೊಯ್ಲಿ

Update: 2024-10-31 16:09 GMT

ಬೆಂಗಳೂರು: ಇಂದಿರಾಗಾಂಧಿ ಅವರು ಈಗ ಇದ್ದಿದ್ದರೆ, ಇಸ್ರೇಲ್ ಮತ್ತು ಫೆಲೆಸ್ತೀನ್ ಯುದ್ಧವನ್ನು ನಡೆಯಲು ಬಿಡುತ್ತಿರಲಿಲ್ಲ. ಅದನ್ನು ನಿಲ್ಲಿಸುವ ಶಕ್ತಿ ಅವರಲ್ಲಿತ್ತು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ಅಂತಾರಾಷ್ಟೀಯ ಮಟ್ಟದಲ್ಲಿ ಭಾರತಕ್ಕೆ ಮಾನ್ಯತೆ ತಂದು ಕೊಟ್ಟರು. ಕೇವಲ ಕಾಂಗ್ರೆಸ್ ಪಕ್ಷವನ್ನು ಗಟ್ಟಿ ಮಾಡಲಿಲ್ಲ. ಈ ದೇಶದ ಜನರನ್ನು ಬಲಿಷ್ಠ ಮಾಡಿದರು ಎಂದರು.

ಸರ್ದಾರ್ ಪಟೇಲ್ ಅವರು ಕೇಂದ್ರ ಗೃಹ ಸಚಿವರಾಗಿದ್ದ ಸಮಯದಲ್ಲಿಯೇ ಮಹಾತ್ಮಾಗಾಂಧಿ ಅವರ ಹತ್ಯೆಯಾದ ಕಾರಣಕ್ಕೆ ಸಾಕಷ್ಟು ನೊಂದಿದ್ದರು. ಇದರಿಂದ ಆರೆಸ್ಸೆಸ್ ಅನ್ನು ನಿಷೇಧ ಮಾಡುವ ಕಾನೂನು ತಂದಿದ್ದರು ಎಂದು ವೀರಪ್ಪ ಮೊಯ್ಲಿ ಹೇಳಿದರು.

ನಾವು ರಾಜಕೀಯಕ್ಕೆ ಬರಲು ಇಂದಿರಾಗಾಂಧಿ ಹಾಗೂ ದೇವರಾಜ ಅರಸು ಅವರ ಪ್ರಗತಿಪರ ಧೋರಣೆಯೇ ಕಾರಣ. ಈ ಇಬ್ಬರ ಚಿಂತನೆಗಳು ಇಲ್ಲದಿದ್ದರೆ ನಾವುಗಳು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರಲಿಲ್ಲ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ಭಾರತದ ಆತ್ಮವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಇಂದಿರಾಗಾಂಧಿ. ದೊಡ್ಡ, ದೊಡ್ಡ ಸಮಾಜಘಾತುಕ ಶಕ್ತಿಗಳನ್ನು ಸದೆಬಡಿದವರು. ನಾನು ಜವಳಿ ಇಲಾಖೆಗೆ 5 ಕೋಟಿ ರೂ. ಹಣ ಬೇಕು ಎಂದಾಗ, ಅದನ್ನು ನೀಡಿ ಪ್ರೋತ್ಸಾಹ ಮಾಡಿದ್ದರು ಎಂದು ವೀರಪ್ಪ ಮೊಯ್ಲಿ ಸ್ಮರಿಸಿದರು.

ಅನಿವಾರ್ಯ ಕಾರಣಗಳಿಗೆ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದರು. 2 ವರ್ಷಗಳ ನಂತರ ಅದನ್ನು ವಾಪಾಸ್ ಪಡೆದರು. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಈಗ ಇರುವುದಕ್ಕಿಂತ ಪಾರದರ್ಶಕವಾದ ಚುನಾವಣೆ ನಡೆಸಿದರು ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ವಿಶ್ವದ ಸಮಾಜವಾದಿ ಒಕ್ಕೂಟಕ್ಕೆ ಶಕ್ತಿ ಕೊಟ್ಟವರು ಇಂದಿರಾಗಾಂಧಿ. ವಿಶ್ವಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮೂರನೇ ರಾಷ್ಟ್ರಗಳ ಒಕ್ಕೂಟ ರಚನೆ ಮಾಡಿ ಬಡ ಹಾಗೂ ಹಿಂದುಳಿದ ದೇಶಗಳ ಪರವಾಗಿ ನಿಂತವರು. ಇಂದಿರಾಗಾಂಧಿ ಅವರ ಘರ್ಜನೆಗೆ ಅಮೇರಿಕ ನಡುಗುತ್ತಿತ್ತು. ಮಹಾತ್ಮಾ ಗಾಂಧಿ ಅವರನ್ನು ದುಷ್ಟರು ಸಂಚು ಮಾಡಿ ಕೊಂದ ರೀತಿ ಇಂದಿರಾಗಾಂಧಿ ಅವರನ್ನು ಕೊಲ್ಲಲಾಯಿತು ಎಂದು ವೀರಪ್ಪ ಮೊಯ್ಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News