ರಾಜ್ಯದಲ್ಲಿ ಗೋಧ್ರಾ ದುರಂತದಂತಹ ಘಟನೆ ಸೃಷ್ಟಿಗೆ ಯತ್ನ ನಡೆಯಲಿದ್ದು, ಸರಕಾರ ಕಟ್ಟೆಚ್ಚರ ವಹಿಸಬೇಕು: ಬಿ.ಕೆ.ಹರಿಪ್ರಸಾದ್

Update: 2024-01-03 15:29 GMT

ಬೆಂಗಳೂರು: ಗುಜರಾತ್‍ನಲ್ಲಿ ನಡೆದ ಗೋಧ್ರಾ ದುರಂತ ಮಾದರಿಯಲ್ಲಿಯೇ ಅವಘಢ ನಡೆಸಲು ಭಾರೀ ಸಂಚು, ಕುಮ್ಮಕ್ಕು ನಡೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ಆಗಬಹುದು. ಈ ಸಂಬಂಧ ನಮಗೆ ಮಾಹಿತಿ ದೊರೆತಿದೆ. ಅಲ್ಲದೆ, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷದ ನಿಲುವಿಗೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ ಎಂದು ಹೇಳಿದರು.

ಕೆಲವು ಸಂಘಟನೆಗಳ ಪ್ರಮುಖರು ಕೆಲ ರಾಜ್ಯಗಳಿಗೆ ಭೇಟಿ ಕೊಟ್ಟು, ಬಿಜೆಪಿ ನಾಯಕರಿಗೆ ಏನು ಪ್ರಚೋದನೆ ಮಾಡಿದ್ದಾರೆ ಎನ್ನುವುದು ಗೊತ್ತು.ಆದರೆ, ಇದನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಒಟ್ಟಾರೆ ಅವರು ಕುಮ್ಮಕ್ಕು ನೀಡುತ್ತಿರುವುದು ಸತ್ಯವಾಗಿದೆ. ಹಾಗಾಗಿ, ರಾಜ್ಯ ಸರಕಾರ ಸೂಕ್ತ ಭದ್ರತೆ ಒದಗಿಸಬೇಕು. ಅಯೋಧ್ಯೆ ಹೋಗುವ ಕರಸೇವಕರು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಬದಲಾಗಿ ಅದು ರಾಜಕೀಯ ಕಾರ್ಯಕ್ರಮವಾಗಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದಲ್ಲಿ ನಮಗೆ ಆಮಂತ್ರಣವೇ ಬೇಕಾಗಿರಲಿಲ್ಲ. ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುತ್ತಿದ್ದೇವು. ಒಂದು ವೇಳೆ ಅದು ನಿಜವಾಗಿ ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಆದರೆ, ರಾಜಕೀಯ ಕಾರ್ಯಕ್ರಮ ಆದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿದ್ದಾರೆ. ಅದು ಅಲ್ಲದೆ, ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಯಾವ ಧರ್ಮಕ್ಕೆ ಸೇರಿದ್ದಾರೆ ಎನ್ನುವುದೇ ಗೊತ್ತಾಗಿಲ್ಲ ಎಂದು ಟೀಕಿಸಿದರು.

ಹಿಂದೂ ಧರ್ಮದ ಗುರುಗಳು ಎಂದರೇ ಅದು ಶಂಕರಾಚಾರ್ಯರು ಮಾತ್ರ. ಹೀಗಿರುವಾಗ ರಾಮಮಂದಿರವನ್ನು ಧರ್ಮ ಗುರುಗಳೇ ಉದ್ಘಾಟಿಸಬೇಕಾಗಿದೆ ಎಂದ ಅವರು, ಹುಬ್ಬಳ್ಳಿಯಲ್ಲಿ ಕರಸೇವಕ ಎಂದ ಮಾತ್ರಕ್ಕೆ ಆತನನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ಇನ್ನೂ, ಉದ್ದೇಶಪೂರಕವಾಗಿ ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಂತಿ ಕದಡುವ ಸಂದರ್ಭದಲ್ಲಿ ಸರಕಾರ ಕ್ರಮ ಕೈಗೊಳ್ಳಲೇಬೇಕು ಎಂದರು.

30 ವರ್ಷ ಆ ಕರಸೇವಕನನ್ನು ಬಂಧಿಸದಿರುವುದು ತಪ್ಪು. ಅದರಲ್ಲೂ ಇದುವರೆಗೂ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಮೇಲೆ ಇರುವ ಪ್ರಕರಣಗಳೇ ಖುಲಾಸೆಗೊಂಡಿಲ್ಲ. ಈಗ ಹುಬ್ಬಳ್ಳಿ ಪ್ರಕರಣವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News