'ರಾಮೇಶ್ವರಂ ಕೆಫೆ'ಯಲ್ಲಿ ಸ್ಫೋಟ ಪ್ರಕರಣ: ಸಿಎಂ, ಡಿಸಿಎಂ, ಗೃಹ ಇಲಾಖೆಯ ಮಾಹಿತಿ ಮಾತ್ರ ಅಧಿಕೃತ: ಡಾ.ಜಿ.ಪರಮೇಶ್ವರ
ಬೆಂಗಳೂರು, ಮಾ.3: 'ರಾಮೇಶ್ವರಂ ಕೆಫೆ'ಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಊಹಾಪೋಹಾ ಹೇಳಿಕೆ ನೀಡುತ್ತಿದ್ದಾರೆ. ನಾನು ಎಲ್ಲರಿಗೂ ವಿನಂತಿ ಮಾಡುತ್ತೇನೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ನಾನು ಅಥವಾ ಗೃಹ ಇಲಾಖೆಯ ಅಧಿಕಾರಿಗಳು ಹೇಳಿದರೆ ಮಾತ್ರ ಅಧಿಕೃತ ಮಾಹಿತಿ ಅಂತ ಪರಿಗಣಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹಳ ಜನ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ಇಲ್ಲದೆ ಹೇಳಿಕೆ ನೀಡುತ್ತಿರುವುದರಿಂದ ಗೊಂದಲವಾಗುತ್ತಿದೆ. ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನೀವೆಲ್ಲ ಹೋಗಿ ಕೇಳಿದಾಗ ಹೇಳಿರುತ್ತಾರೆ. ಅದು ಅಧಿಕೃತ ಅಂತ ಅನ್ನಿಸುವುದಿಲ್ಲ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಹೇಳಿಕೆ ನೀಡುವಾಗ ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನ್ ಕುಕ್ಕರ್ ಬಾಂಬ್ ಸ್ಫೋಟಕ್ಕೆ ತಾಂತ್ರಿಕ ಸಾಮ್ಯತೆ
ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟದ ರೀತಿಯಲ್ಲೇ ಈ ಪ್ರಕರಣದಲ್ಲೂ ಸ್ಫೋಟದ ವಸ್ತುಗಳನ್ನು ಜೋಡಿಸಿರುವ ತಾಂತ್ರಿಕ ಸಾಮ್ಯತೆ ಕಂಡು ಬರುತ್ತಿದೆ, ಬ್ಯಾಟರಿ ಬಳಕೆ, ಟೈಮರ್ ಇನ್ನಿತರ ವಿಚಾರವನ್ನು ಗಮನಿಸಿದರೆ ತಾಂತ್ರಿಕವಾಗಿ ಅದೇರೀತಿ ಜೋಡಿಸಿದ್ದಾರೆ. ಒಂದೇ ತರ ಕಾಣಿಸುತ್ತಿದೆ. ಆದರೆ ಇಂತಹದ್ದೇ ಸಂಘಟನೆಯವರು ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಗೃಹಸಚಿವರು ಸ್ಪಷ್ಟಪಡಿಸಿದರು.
ಸ್ಫೋಟದ ತೀವ್ರತೆ ಬಹಳ ಕಡಿಮೆ ಇರುವುದು ಪರೀಶೀಲನೆಯಲ್ಲಿ ಕಂಡುಬಂದಿದೆ. ಹೀಗಾಗಿ ದೊಡ್ಡ ಅನಾಹುತ ಸಂಭವಿಸಿಲ್ಲ. ಬಳಕೆಯಾದ ಸ್ಫೋಟಕ ವಸ್ತುಗಳು ಕಡಿಮೆ ಇರಬಹುದು. ಬಾಂಬ್ ಸಿಡಿದಾಗ ಮೊಳೆಗಳು, ನೆಟ್ ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಸೈಡಿಗೆ ಸಿಡಿದಿದ್ದರೆ ಬಹಳ ಜನರಿಗೆ ಪ್ರಾಣಾಪಾಯ ಆಗುತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ ಎಂದು ತಿಳಿಸಿದರು.
ಎನ್ ಐಎ ಮತ್ತು ಎನ್ಎಸ್ಜಿ ಅಧಿಕಾರಿಗಳು ಬಂದು ತನಿಖೆ ಮಾಡುತ್ತಿದ್ದಾರೆ. ಸ್ಫೋಟದ ರೀತಿಯನ್ನು ಗಮನಿಸಿರುವ ಎನ್ಐಎ ಅಧಿಕಾರಿಗಳಿಗೆ ಯಾವ ಸಂಘಟನೆಯವರು ಮಾಡಿರಬಹುದು ಎಂಬ ಅಂದಾಜು ಇರುತ್ತದೆ. ಶೀಘ್ರದಲ್ಲಿ ಆರೋಪಿಗಳನ್ನು ಹಿಡಿಯುತ್ತೇವೆ ಎಂದರು.
26 ಬಸ್ ಗಳಲ್ಲಿನ ಕ್ಯಾಮೆರಾ ಪರಿಶೀಲನೆ:
ಬೆಂಗಳೂರು ನಗರವನ್ನು ಸೇಫ್ ಸಿಟಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಸರಕಾರ ಸೇಫ್ ಸಿಟಿ ಮಾಡಿ ಬಹಳ ಹಣ ಖರ್ಚು ಮಾಡಿ, ಕ್ಯಾಮರಾ ಹಾಕಿದ್ದೇವೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನು ಮಾನಿಟರ್ ಮಾಡ್ತಿದ್ದೇವೆ. ಬೆಂಗಳೂರು ಈಗ ಸುರಕ್ಷತೆಯಲ್ಲಿ ಎಷ್ಟೋ ಉತ್ತಮವಾಗಿದೆ. ಸ್ಥಳದ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸ್ಫೋಟದ ಸಂದರ್ಭದಲ್ಲಿ 26 ಬಸ್ಗಳು ಸಂಚರಿಸಿವೆ. 26 ಬಸ್ ಗಳಲ್ಲಿನ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ತಾಂತ್ರಿಕ ವಿಚಾರಗಳ ಬಗ್ಗೆ ಹೇಳುವುದಿಲ್ಲ ಎಂದು ತಿಳಿಸಿದರು.