ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ನಿಧನ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ್ ರಾವ್(75) ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
‘ಪ್ರಜಾವಾಣಿ’ ದಿನಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಎಂ.ಕೆ. ಭಾಸ್ಕರ್ ಅವರು, ನಿವೃತ್ತಿಯ ನಂತರ ಅಂಕಣಕಾರರಾಗಿ ಗುರುತಿಸಿಕೊಂಡಿದ್ದರು.
ನಟ ಉಪೇಂದ್ರ ಅಭಿನಯದ ‘ಹಾಲಿವುಡ್’ ಸಿನಿಮಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಎಂ.ಕೆ. ಭಾಸ್ಕರ್ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿದಂತೆ ಮುಂತಾದ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು.
ಎಂ.ಕೆ. ಭಾಸ್ಕರ್ ರಾವ್ ನಿಧನಕ್ಕೆ ಸಿಎಂ ಸಂತಾಪ
"ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್ ಅವರ ನಿಧನದಿಂದ ದು:ಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಪ್ರಜಾವಾಣಿಯ ದಿನಗಳಿಂದಲೂ ನಾನು ಬಲ್ಲ ಭಾಸ್ಕರ ರಾವ್ ನಿವೃತ್ತಿಯ ನಂತರವೂ ಪತ್ರಕರ್ತನಾಗಿ ಸಕ್ರಿಯರಾಗಿದ್ದರು. ತನ್ನ ಸೌಜನ್ಯಭರಿತ ನಡವಳಿಕೆಯಿಂದ ಎಲ್ಲರಿಗೂ ಆತ್ಮೀಯರಾಗಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು"
ಮುಖ್ಯಮಂತ್ರಿ ಸಿದ್ದರಾಮಯ್ಯ