ವಕೀಲರ ಸಮ್ಮೇಳನದಲ್ಲಿ ಹಣ ದುರ್ಬಳಕೆ ಆರೋಪ: ನಾಲ್ವರ ವಿರುದ್ಧ ಎಫ್‍ಐಆರ್ ದಾಖಲು

Update: 2024-04-18 17:07 GMT

ಬೆಂಗಳೂರು: ಮೈಸೂರಿನಲ್ಲಿ ನಡೆದ ರಾಜ್ಯ ವಕೀಲರ ಸಮ್ಮೇಳನದಲ್ಲಿ 50 ಲಕ್ಷ ರೂ. ದುರ್ಬಳಕೆ ಮಾಡಿಕೊಂಡ ಆರೋಪದಡಿಯಲ್ಲಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯರೊಬ್ಬರು ಸೇರಿದಂತೆ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ರಾಜ್ಯ ವಕೀಲರ ಪರಿಷತ್ ಸದಸ್ಯರೂ ಮತ್ತು ಹೈಕೋರ್ಟ್‍ನ ಹಿರಿಯ ವಕೀಲರೂ ಆದ ಎಸ್. ಬಸವರಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ಪರಿಷತ್ ಪದಾಧಿಕಾರಿಗಳ ವಿರುದ್ಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್ 2023ರ ಆಗಸ್ಟ್ 12 ಮತ್ತು 13ರಂದು ಎರಡು ದಿನಗಳ ಕಾಲ ಮೈಸೂರಿನಲ್ಲಿ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ 1 ಸಾವಿರದಂತೆ ಒಟ್ಟು 1,16,33,000 ರೂ. ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು.

ರಾಜ್ಯ ಸರಕಾರ 1.8ಲಕ್ಷ ರೂ.ಅನುದಾನ ನೀಡಿತ್ತು. ಮತ್ತು ರಾಜ್ಯ ವಕೀಲರ ಪರಿಷತ್‍ನಿಂದ 75ಲಕ್ಷ ರೂ. ಬಿಡುಗಡೆಯಾಗಿತ್ತು. ಒಟ್ಟು ಮೊತ್ತ 3,30,33,000 ರೂ. ಸಂಗ್ರಹವಾಗಿತ್ತು. ಈ ಹಣ ಪರಿಷತ್‍ನ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಆದರೆ ಬಳಕೆಯಲ್ಲಿ ದುರುಪಯೋಗ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‍ನ 50ಲಕ್ಷ ರೂ. ಮೊತ್ತವನ್ನು ಬ್ಯಾಂಕ್‍ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಗಳನ್ನು, ನಕಲಿ ಬಿಲ್ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರಕಾರಕ್ಕೆ ಸಲ್ಲಬೇಕಾದ ಜಿಎಸ್‍ಟಿ ಹಣವನ್ನು ಸಲ್ಲಿಸದೇ ಮೋಸ ಮಾಡುವ ಉದ್ದೇಶದಿಂದ ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಎಸ್.ಬಸವರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News