ಬೆಂಗಳೂರು | ಸರಿಯಾಗಿ ವೇತನ ನೀಡದ ಆರೋಪ : ಎಲೆಕ್ಟ್ರಿಕ್ ಬಸ್ ಚಾಲಕರ ಧರಣಿ

Update: 2024-05-14 16:44 GMT

ಬೆಂಗಳೂರು : ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಶಾಂತಿನಗರ ಡಿಪೋ 3ರ ಮುಂದೆ ಮಂಗಳವಾರ ಚಾಲಕರು ಧರಣಿ ನಡೆಸಿದ್ದಾರೆ.

ಮೊದಲಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಟಾಟಾ ಕಂಪೆನಿಯಲ್ಲಿ ಕೆಲಸ ಎಂದು ಹೇಳಿದ್ದರು. ಇದೀಗ, ಆರ್ಯ ಕಂಪೆನಿಯಲ್ಲಿ ಕೆಲಸ ನೀಡಿದ್ದಾರೆ. ಅಲ್ಲದೇ, ತಿಂಗಳಿಗೆ 26 ಸಾವಿರ ರೂ. ವೇತನ ನೀಡುತ್ತೇವೆ ಎಂದಿದ್ದರು. ಆದರೀಗ, ಕೇವಲ 18 ಸಾವಿರ ರೂ. ನೀಡುತ್ತಿದ್ದಾರೆ. ಬರುವ ವೇತನದಲ್ಲಿ ಕಡಿತ ಮಾಡುತ್ತಿರುವ ಹಣ ಪಿಎಫ್ ಖಾತೆಗೂ ಜಮೆ ಆಗುತ್ತಿಲ್ಲ. ವಸತಿ ಸೌಲಭ್ಯ ನೀಡುತ್ತೇವೆ ಎಂದಿದ್ದರು. ಇದೀಗ ಅದೂ ಇಲ್ಲ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಸರಿಯಾಗಿ ತಿಂಗಳಿಗೆ ವೇತನ ಆಗುತ್ತಿಲ್ಲ. ಜತೆಗೆ ನಾವು ಕೆಲಸ ಮತ್ತು ಓಟಿ ಸೇರಿ ತಿಂಗಳಲ್ಲಿ 40-42 ಸಾವಿರ ರೂ.ವರೆಗೆ ದುಡಿಯುತ್ತಿದ್ದೇವೆ. ಆದರೆ, ನಮಗೆ ಸುಮಾರು 42 ಸಾವಿರ ರೂ. ಕೊಡುವ ಬದಲಿಗೆ ಕೇವಲ 18-20 ಸಾವಿರ ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಈ ಪುರುಷಾರ್ಥಕ್ಕೆ ನಾವು ಕೆಲಸ ಏಕೆ ಮಾಡಬೇಕು ಎಂದು ಚಾಲಕರು ಪ್ರಶ್ನಿಸಿದ್ದಾರೆ.

ಬಿಎಂಟಿಸಿಯಲ್ಲಿ ಒಟ್ಟು 6842 ಬಸ್‍ಗಳಿವೆ. ಅದರಲ್ಲಿ ಸಾಮಾನ್ಯ 5642 ಬಸ್‍ಗಳಿದ್ದರೆ, 600 ಎಸಿ ಬಸ್‍ಗಳಿವೆ. 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳಿವೆ. ಡಿಪೋ-3 ಒಂದರಲ್ಲೇ 113 ಎಲೆಕ್ಟ್ರಿಕ್ ಬಸ್‍ಗಳು ಸಂಚರಿಸುತ್ತವೆ. ಇಲ್ಲಿ ಮೂರು ಶಿಫ್ಟ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ವೇತನ ಮಾತ್ರ ಸಿಗುತ್ತಿಲ್ಲ ಎಂದು ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News