ಗೃಹ ಸಚಿವ ಯಾರೆಂದೇ ಗೊತ್ತಿಲ್ಲ: ಆರ್.ಅಶೋಕ್

Update: 2024-05-26 15:31 GMT

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟು ಹದಗೆಟ್ಟು ಹೋಗಿದೆ ಎಂದರೆ, ಗೃಹ ಮಂತ್ರಿ ಯಾರೆಂದೇ ಗೊತ್ತಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ರವಿವಾರ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕುರಿತ ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಣ್ಣು ಮಕ್ಕಳು ಶಾಲೆಗೆ ಹೋದರೆ, ಮಹಿಳೆಯರು ಕೆಲಸಕ್ಕೆ ಹೋದರೆ ಮನೆಗೆ ವಾಪಸ್ ಬರುವ ಗ್ಯಾರಂಟಿಯೇ ಇಲ್ಲ ಎಂದರು.

ಮಾಜಿ ಸಂಸದ ಶಿವರಾಮೇಗೌಡ ಎನ್ನುವ ವ್ಯಕ್ತಿ ಹೇಳುತ್ತಾನೆ. ಪ್ರಧಾನಿ ಮೋದಿಗೆ ಹೇಳಿ ಜೆಡಿಎಸ್-ಬಿಜೆಪಿ ಭಾಗ ಮಾಡಿಬಿಟ್ಟರೆ ನಮಗೆ ಒಳ್ಳೆಯದು. ಇವರೆಂಥಾ ಚಂಡಾಳರು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆವರೆಗೂ ಇವರು ಒಂದಾಗಿದ್ದರೆ ನಮಗೆ ಉಳಿಗಾಲ ಇಲ್ಲ ಎನ್ನುವುದು ಅವರ ಹೆದರಿಕೆ ಎಂದು ಅವರು ಲೇವಡಿ ಮಾಡಿದರು.

ಇವರು ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದರು.ಕೆಲಸ ಆಗಬೇಕಾದರೆ ಕೈ ಎತ್ತು. ಕೆಲಸ ಆದ ಮೇಲೆ ಚೂರಿ ಹಾಕು. ಇದೇ ಕಾಂಗ್ರೆಸ್ ನೀತಿ ಆಗಿದೆ. ಇನ್ನೂ, ಕಾಂಗ್ರೆಸ್ ಸರಕಾರ ಎಲ್ಲ ಕಡೆ ಲೂಟಿ ಮಾಡುತ್ತಿದೆ. ಈಗ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಮಾರಾಟಕ್ಕೆ ಇಟ್ಟಿದೆ. ಸರ್ಕಾರದಲ್ಲಿ ಹಣ ಇಲ್ಲ. ಅವರ ವರಿಷ್ಠರಿಗೆ ಕಪ್ಪ ಕೊಡಲು ಇಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News