ಸಿದ್ದರಾಮಯ್ಯನವರೇ, ಮೂರು ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ: ಬಿಜೆಪಿ ಟೀಕೆ

Update: 2024-05-26 16:20 GMT

ಬೆಂಗಳೂರು : ‘ಚುನಾವಣೆಯಲ್ಲಿ ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಗ್ಯಾರಂಟಿಗಳಿಗೆ ಲಭಿಸಿದೆ ಸಂಚಕಾರ. ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರು, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು ಹೋದದ ಅಪರಾವತಾರ. ಸಿಎಂ ಸಿದ್ದರಾಮಯ್ಯ ಅವರೇ, 3 ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ, ದುಡ್ಡು ಕೊಡ್ತಿರೋ ಇಲ್ವೋ ಅನ್ನೊದನ್ನ ಹೇಳ್ಬಿಡಿ’ ಎಂದು ವಾಗ್ದಾಳಿ ನಡೆಸಿದೆ.

‘ಕರ್ನಾಟಕದ ಆರ್ಥಿಕತೆಯನ್ನು ದಿವಾಳಿಯನ್ನಾಗಿ‘ಸಿದ್ದು’, ಕರ್ನಾಟಕವನ್ನು ಅರಾಜಕತೆಯ ನಾಡನ್ನಾಗಿ’ಸಿದ್ದು’, ಇವೇ ಸಿಎಂ ಸಿದ್ದರಾಮಯ್ಯ ಅವರ ಸರಕಾರ ತಮ್ಮ ಒಂದು ವರ್ಷದ ಆಡಳಿತದಲ್ಲಿ ಸಾಧಿ’ಸಿದ್ದು’. ಅಭಿವೃದ್ಧಿಯನ್ನು ಕಡೆಗಣಿಸಿರುವ ಕಾಂಗ್ರೆಸ್, ಲೋಕಾರ್ಪಣೆ ಎಂದರೇ ಮಚ್ಚು, ಲಾಂಗುಗಳ ಪ್ರದರ್ಶನ, ಶಂಕುಸ್ಥಾಪನೆ ಎಂದರೆ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರಗಳು ಎಂದು ಭಾವಿಸಿದಂತಿದೆ. ಈ ಪರಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು’ ಎಂದು ಬಿಜೆಪಿ ಟೀಕಿಸಿದೆ.

‘ಕಾಂಗ್ರೆಸ್ ಸರಕಾರದಲ್ಲಿ ಯಾವುದೂ ಸರಿಯಿಲ್ಲ. 3 ತಿಂಗಳಿಂದ ಅನ್ನಭಾಗ್ಯದ ಅಕ್ಕಿ ಸಿಕ್ಕಿಲ್ಲ, ಸರಕಾರಿ ಆಸ್ಪತ್ರೆಗಳಲ್ಲಿ ಆಪರೇಶನ್ ಆಗಲ್ಲ, ರೈತರಿಗೆ ಬಿತ್ತನೆ ಬೀಜದ ಬೆಲೆ ಕೈಗೆಟುಕುತ್ತಿಲ್ಲ, ಸರ್ವರ್ ಡೌನ್‍ನಿಂದ ನೋಂದಣಿ ಆಗ್ತಿಲ್ಲ. ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಸರಕಾರದಲ್ಲಿ ಯಾವುದಾದರೂ ಒಂದು ಇಲಾಖೆಯಾದರೂ ನೆಟ್ಟಗೆ ಕೆಲಸ ಮಾಡುತ್ತಿದೆಯಾ?. ಯಾವುದಾದರೂ ಒಂದು ಸೇವೆಯಾದರೂ ಜನರಿಗೆ ಲಭ್ಯವಾಗುತ್ತಿದೆಯಾ?, ಕರ್ನಾಟಕದ ಇತಿಹಾಸದಲ್ಲಿ ಇಂತಹ ನಿಷ್ಕ್ರಿಯ, ನಾಲಾಯಕ್ ಸರಕಾರವನ್ನ ಕನ್ನಡಿಗರು ಎಂದೂ ಕಂಡಿಲ್ಲ. ಕರ್ನಾಟಕದ ಜನತೆಯ ಪಾಲಿಗೆ ಸರಕಾರ ಸತ್ತುಹೋಗಿದೆ’

ಆರ್.ಅಶೋಕ್ ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News