ಪ್ರಧಾನಿ ದೇವದೂತನಾಗಿ ಬರಬೇಕಾಯಿತು ಎಂಬುದು ಮಹಾ ದುರಂತಗಳಲ್ಲಿ ಒಂದು : ಎಚ್.ಸಿ.ಮಹದೇವಪ್ಪ

Update: 2024-05-27 14:20 GMT

ಬೆಂಗಳೂರು : ಪ್ರಧಾನಿ ದೇವದೂತನಾಗಿ ಬರಬೇಕಾಯಿತು ಎಂಬುದು ನಮ್ಮ ಕಾಲದ ಮಹಾ ದುರಂತಗಳಲ್ಲಿ ಒಂದು ಎಂದು ಪ್ರಧಾನಿ ಮೋದಿ ವಿರುದ್ಧ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, "ದೇವದೂತ ಬಂದ ನಂತರವೇ 72 ರೂ.ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿಗೆ ಏರಿತು. 60 ರೂ. ಇದ್ದ ಡೀಸೆಲ್ 85 ರೂ.ಗಳಿಗೆ ಏರಿಕೆಯಾಯಿತು. ಡಾಲರ್ ಎದುರು ರೂಪಾಯಿಯು ಭಾರೀ ಕುಸಿತ ಕಂಡಿತು" ಎಂದು ಟೀಕಿಸಿದ್ದಾರೆ.

ʼಅಡುಗೆ ಸಿಲಿಂಡರ್ ಬೆಲೆ 400 ರಿಂದ 1000 ರೂಪಾಯಿಗೆ ಏರಿಕೆ ಕಂಡಿತು. ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು. ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 55 ರಿಂದ 102 ನೇ ಸ್ಥಾನಕ್ಕೆ ಕುಸಿಯಿತು. ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು. ಕೊರೋನ ಸಂದರ್ಭದಲ್ಲಿ ಆಕ್ಸಿಜನ್ ದೊರಕದೇ ಲೆಕ್ಕವಿಲ್ಲದಷ್ಟು ಸಾವು ನೋವುಗಳಾಯಿತುʼ ಎಂದು ಮಹದೇವಪ್ಪ ದೂರಿದ್ದಾರೆ.

ʼಚೀನಾವು ಗಡಿ ಪ್ರದೇಶದಲ್ಲಿ ಭಾರತವನ್ನು ಆಕ್ರಮಿಸಿ ತನ್ನ ಗ್ರಾಮಗಳನ್ನು ನಿರ್ಮಿಸಿತು. ಕೋಮುದ್ವೇಷ ಹೆಚ್ಚಾಗಿ ಸಾಮರಸ್ಯದ ವಾತಾವರಣ ಹಾಳಾಯಿತು. ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು. ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು ಕೋರ್ಟ್ ಮೆಟ್ಟಿಲೇರಿ ಪಡೆಯುವಂತೆ ಆಯಿತುʼ ಎಂದು ಅವರು ಆರೋಪಿಸಿದ್ದಾರೆ.

ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು. ಯೋಜನೆಗಳ ಸಮೇತ ಇದ್ದ ದೇಶದ ಸಾಲವು 55 ಲಕ್ಷ ಕೋಟಿಗಳಿಂದ ಯೋಜನೆಗಳಿಲ್ಲದಂತೆ 185 ಲಕ್ಷ ಕೋಟಿ ರೂ.ಗೆ ಏರಿಕೆ. ಕಾರ್ಪೊರೇಟ್ ಧಣಿಗಳು ಹೆಚ್ಚು ಶ್ರೀಮಂತರಾಗಿ, ಬಡವರು ಕಣ್ಣು ಬಾಯಿ ಬಿಡುವಂತೆ ಆಯಿತು ಎಂದು ಮಹದೇವಪ್ಪ ತಿಳಿಸಿದ್ದಾರೆ.

ದೇಶದ ಒಳಗಡೆ, ಅಜ್ಞಾನ, ಮೌಢ್ಯತೆ, ಸಾಮಾಜಿಕ ಮತ್ತು ರಾಜಕೀಯ ಅಸಹನೆಯು ಹೆಚ್ಚಾಯಿತು. ಇಂತಹ ಅಪದ್ದಗಳನ್ನು ಮಾಡುವುದಾಕ್ಕಾಗಿಯೆ ಆತ ದೇವದೂತನಾಗಿ ಬರಬೇಕಾಯಿತು ಎಂಬುದು ನಮ್ಮ ಕಾಲದ ಮಹಾ ದುರಂತಗಳಲ್ಲಿ ಒಂದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News