ಉತ್ತರಾಖಂಡ ಚಾರಣ ದುರಂತ | ಮೃತದೇಹಗಳು ಹಸ್ತಾಂತರ, ಕುಟುಂಬಸ್ಥರ ಅಕ್ರಂದನ
ಬೆಂಗಳೂರು : ಉತ್ತರಾಖಂಡದ ಸಹಸ್ತ್ರತಾಲ್‍ಗೆ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ಮೃತಪಟ್ಟಿದ್ದ ರಾಜ್ಯದ ಒಂಬತ್ತು ಚಾರಣಿಗರ ಮೃತದೇಹಗಳನ್ನು ಹಸ್ತಾಂತರಿಸಲಾಗಿದ್ದು, ಈ ಸಂದರ್ಭದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತ್ತು.
ಶುಕ್ರವಾರ ಬೆಳಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಸಚಿವ ಕೃಷ್ಞಭೈರೇಗೌಡ ಅವರ ನೇತೃತ್ವದಲ್ಲಿ ಅಧಿಕಾರಿಗಳು, ಕೆ.ಪಿ.ಪದ್ಮನಾಭ, ಕೆ.ವೆಂಕಟೇಶ್ ಪ್ರಸಾದ್, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಸೇರಿದಂತೆ ಒಂಭತ್ತು ಮಂದಿಯ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.
ಉತ್ತರಾಖಂಡದ ಸಹಸ್ತ್ರ ತಾಲ್‍ಗೆ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿದ್ದವರ ಪೈಕಿ ರಕ್ಷಣೆಗೆ ಒಳಗಾದ 13 ಮಂದಿಯನ್ನು ಒಳಗೊಂಡ ತಂಡವು ನಿನ್ನೆ ರಾತ್ರಿ 9.30ರ ಸುಮಾರಿಗೆ ವಿಮಾನದ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಈ ಚಾರಣಿಗರ ಜತೆಗೆ ಆಗಮಿಸಿದರು.
ಇನ್ನೂ, ಅವರು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆಂದು ಡೆಹ್ರಾಡೂನ್‍ಗೆ ಬುಧವಾರ ಬೆಳಿಗ್ಗೆ ತೆರಳಿದ್ದರು. ವಿಮಾನ ನಿಲ್ದಾಣದ ಬಳಿ ಕಾದಿದ್ದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ಬಂದ ಚಾರಣಿಗರನ್ನು ಸ್ವಾಗತಿಸಿದರು. ಇನ್ನೊಂದೆಡೆ, ಬುಧವಾರ ಐದು ಮೃತದೇಹಗಳು ಸಿಕ್ಕಿದ್ದವು. ನಾಪತ್ತೆಯಾದ ನಾಲ್ವರ ಪತ್ತೆಗೆ ಪ್ರತಿಕೂಲ ಪರಿಸ್ಥಿತಿಯಿಂದ ಬುಧವಾರ ಸಂಜೆ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. ಆನಂತರ, ದುರಂತ ಸ್ಥಳದ ಬಳಿಯಿಂದ ಸೇನಾ ಹೆಲಿಕಾಪ್ಟರ್‍ನಲ್ಲಿ ಉತ್ತರಕಾಶಿಗೆ ಸ್ಥಳಾಂತರಿಸಲಾಗಿದೆ ಎಂದು ಕೃಷ್ಣಭೈರೇಗೌಡ ಮಾಹಿತಿ ನೀಡಿದರು.
9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹ ರವಾನಿಸುವ ಸಂಬಂಧ ಉತ್ತರಾಖಂಡ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಚರ್ಚಿಸಿದ್ದರು. ತದನಂತರ, ಉತ್ತರಕಾಶಿಯಿಂದ ಮೃತದೇಹಗಳನ್ನು ನೇರವಾಗಿ ಬೆಂಗಳೂರಿಗೆ ರವಾನೆ ಮಾಡಲು ಸಾಧ್ಯವಾಗಿಲ್ಲ.ರಸ್ತೆ ಮಾರ್ಗದ ಮೂಲಕ ಆಂಬುಲೆನ್ಸ್‍ನಲ್ಲಿ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಮೃತದೇಹ ತರಲಾಯಿತು. ಶುಕ್ರವಾರ ಸಂಜೆ ವೇಳೆಗೆ ಎಲ್ಲ ಮೃತದೇಹಗಳು ಬೆಂಗಳೂರಿಗೆ ತಲುಪಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಸಾವಿನಲ್ಲೂ ಒಂದಾದ ದಂಪತಿ: ಚಾರಣಕ್ಕೆ ಹೋದ 22 ಮಂದಿಯ ಪೈಕಿ ಹುಬ್ಬಳ್ಳಿ ಮೂಲದ ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ಮುಂಗುರವಾಡಿ ದಂಪತಿ ಕೊನೆಯುಸಿರೆಳೆದಿದ್ದಾರೆ. ಈ ದಂಪತಿ ಜನನ ವರ್ಷ ಬೇರೆ ಬೇರೆಯಾದರು ದಿನಾಂಕ ತಿಂಗಳು ಒಂದೇ(ಅಕ್ಟೋಬರ್ 3) ಆಗಿತ್ತು. ವಿಪರ್ಯಾಸವೆಂದರೆ ಜೂ.4ರಂದು ಒಟ್ಟಿಗೆ ಮೃತಪಟ್ಟು ಸಾವಲ್ಲಿಯೂ ಒಂದಾಗಿದ್ದಾರೆ ಎನ್ನಲಾಗಿದೆ.