ದರ್ಶನ್ ಸೇರಿ ಆರೋಪಿಗಳಿಗೆ ‘ರಾಜಾತಿಥ್ಯ’ ಆರೋಪ : ಸಿಸಿಟಿವಿ ದೃಶ್ಯ ನೀಡುವಂತೆ ವಕೀಲರ ನಿಯೋಗ ಆಗ್ರಹ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿ ಇನ್ನುಳಿದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ ಆರೋಪದಡಿ ವಕೀಲರ ನಿಯೋಗವು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಭೇಟಿ ನೀಡಿ ಪ್ರಶ್ನಿಸಿತ್ತು. ಸತ್ಯಾಸತ್ಯತೆ ಅರಿಯಲು ಠಾಣೆಯ 48 ಗಂಟೆಯೊಳಗಿನ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಆಗ್ರಹಿಸಿ ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 18 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಆರೋಪಿತರಿಗೆ ರಾಜ್ಯಾತಿಥ್ಯ ಕಲ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ವಕೀಲರ ನಿಯೋಗ ಆರ್ ಟಿಐ ಅಡಿ ಅರ್ಜಿ ಹಾಕಿ ಕಳೆದ 48 ಗಂಟೆಯೊಳಗಿವರೆಗೂ ಠಾಣೆಯ ಒಳಾಂಗಣ ಸಿಸಿಟಿವಿ ದೃಶ್ಯ ನೀಡುವಂತೆ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ವಕೀಲ ಉಮಾಪತಿ, ಕೊಲೆ ಪ್ರಕರಣದ ಆರೋಪಿಗಳಿಗೆ ವಿಶೇಷ ಆತಿಥ್ಯ ಕೊಟ್ಟಿರುವ ಆರೋಪ ಹಿನ್ನೆಲೆಯಲ್ಲಿ ಸತ್ಯಾಸತ್ಯಾತೆ ತಿಳಿಯಲು ಸಿಸಿಟಿವಿ ದೃಶ್ಯಾವಳಿ ಲಗತ್ತಿಸಬೇಕೆಂದು ಆರ್ ಟಿಐ ಅಡಿ ಅರ್ಜಿ ಸಲ್ಲಿಸಲಾಗಿದೆ. ಸಿಸಿಟಿವಿ ಸಿಕ್ಕರೆ ಎಲ್ಲವೂ ಗೊತ್ತಾಗಲಿದೆ. ಪೊಲೀಸ್ ಠಾಣೆ ಬಳಿ ಸೆಕ್ಷನ್ 144 ಹಾಕಲು ಕಾರಣವೇನು?, ಶಾಮಿಯಾನ ಹಾಕಲು ಕಾರಣವೇನು?. ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಮಾತನಾಡಿ, ಈ ಹಿಂದೆ ಆರ್.ಆರ್.ನಗರದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿಯು ಬಡವರ ಮನೆ ಹೊಡೆದಾಕಿದ್ದರು. ಆ ವೇಳೆ ದರ್ಶನ್ ಮತ್ತು ಶಿವಶಂಕರಪ್ಪ ಮನೆ ಬಿಟ್ಟಿದ್ದರು. ಅಂದು ಯಾರು ದರ್ಶನ್ ಕಾಪಾಡಿದ್ದರು, ಅದೇ ಶಕ್ತಿ ಮತ್ತೆ ಕಾಪಾಡಲು ಮುಂದಾಗಿದೆ. ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದು ಸರ್ವಾಧಿಕಾರಿ ಧೋರಣೆನಾ ಎಂದು ಪ್ರಶ್ನಿಸಿದರು.
ಆರೋಪಿಗಳಿಗೆ ವಿಶೇಷ ಆತಿಥ್ಯ ಕೊಟ್ಟಿದ್ದರಾ ಎಂಬ ಬಗ್ಗೆ ಪೊಲೀಸರಲ್ಲಿ ಮಾಹಿತಿ ಕೇಳಿದ್ದೇವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಯಾವ ಕಾರಣಕ್ಕೂ ಸಿಸಿಟಿವಿ ಕೊಡುವುದಕ್ಕೆ ಆಗಲ್ಲ ಎಂದು ಹೇಳುವಹಾಗಿಲ್ಲ. ಅದನ್ನು ಕೊಟ್ಟ ಮೇಲೆ ಸತ್ಯ ಸತ್ಯಾತೆ ಗೊತ್ತಾಗಲಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್‍ಗೆ ಸಿಗರೇಟು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 144 ಸೆಕ್ಷನ್ ಜಾರಿ ನೆಪದಲ್ಲಿ ಠಾಣೆಯ ಮುಂದಿನ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದರಿಂದ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದರು.