ಅವಸರದಲ್ಲಿ ಉದ್ಘಾಟಿಸಿದ್ದಕ್ಕೆ ಅಯೋಧ್ಯೆ ರಾಮ ಮಂದಿರ ಸೋರುತ್ತಿದೆ : ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ : ಬಿಜೆಪಿಯವರು ಲೋಕಸಭಾ ಚುನಾವಣೆಗಾಗಿ ಅವಸರದಲ್ಲಿ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಿ ಉದ್ಘಾಟನೆ ಮಾಡಿದ್ದರಿಂದ ಈಗ ಸೋರುವ ಪರಿಸ್ಥಿತಿ ಬಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಮಂಗಳವಾರ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೇವಸ್ಥಾನ ಕಟ್ಟಿಸಲಿ. ದೇವರ ಬಗ್ಗೆ ನಮಗೂ ಗೌರವ, ಭಕ್ತಿ ಇದೆ. ಆದರೆ, ಶ್ರೀರಾಮ, ಆಂಜನೇಯನನ್ನು ರಾಜಕಾರಣಕ್ಕೆ ತಂದು ಅವಸರ ಮಾಡಿದ್ದಕ್ಕೆ ಇವತ್ತು ರಾಮಮಂದಿರ ಸೋರುವ ಪರಿಸ್ಥಿತಿ ಬಂದಿದೆ. ರಾಮಮಂದಿರ ಕಟ್ಟಿರುವ ಅಯೋಧ್ಯೆಯಲ್ಲಿ ಸಮಾಜವಾದಿ ಪಾರ್ಟಿ ಗೆದ್ದಿದೆ ಎಂದು ಹೇಳಿದರು.
ಕಾಂಗ್ರೆಸ್‍ನಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪಮುಖ್ಯಮಂತ್ರಿ ಚರ್ಚೆ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ. ಸರಕಾರ ಬಹಳ ಚೆನ್ನಾಗಿ ನಡೆಯುತ್ತಿದೆ. ಸಿಎಂ ಮತ್ತು ಡಿಸಿಎಂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕೇ ಹೊರತು ಡಿಸಿಎಂ ಕುರಿತು ಚರ್ಚೆಯಲ್ಲ ಎಂದು ಅವರು ಹೇಳಿದರು.