ಸಿದ್ದರಾಮಯ್ಯರ ಪತ್ನಿಗೆ ಜಮೀನು ನೀಡಿರುವುದು ಅಕ್ರಮವಲ್ಲ : ಎಂ.ಲಕ್ಷ್ಮಣ್
ಬೆಂಗಳೂರು : ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮರಿಗೆ ಜಮೀನು ನೀಡಿರುವುದು ಅಕ್ರಮವಲ್ಲ, ಅದು ಅವರ ಹಕ್ಕಿನಂತೆ ನೀಡಿರುವ ಜಮೀನು. ಇದಕ್ಕೂ ಮುಡಾ ಹಗರಣಕ್ಕೂ ತಳುಕು ಹಾಕುವುದು ಬೇಡ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾರ್ವತಮ್ಮ ಅವರಿಗೆ ಜಮೀನು 2010ರಲ್ಲಿ ಬಂದಿದ್ದು, ಅದಾದ ನಂತರ ಏನಾದರೂ ಅಕ್ರಮವಾಗಿದ್ದರೆ ಅದನ್ನು ವಿಪಕ್ಷದವರು ಪ್ರಶ್ನೆ ಮಾಡಬೇಕು. ಅದಕ್ಕಿಂತ ಮುಂಚಿನ ವಿಚಾರದ ಬಗ್ಗೆ ನಾವು ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿದ್ದರಾಮಯ್ಯ ದಂಪತಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸತ್ತ ವ್ಯಕ್ತಿ ಹೆಸರಲ್ಲಿ ಹೇಗೆ ಡಿನೋಟಿಫಿಕೇಶನ್ ಆಗುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರ ಮಂತ್ರಿಯಾಗಿರುವವರು. ಅವರಿಗೆ ಕನಿಷ್ಠ ಪರಿಜ್ಞಾನ ಇರಬೇಕಾಗಿತ್ತು. ಯಾವುದೇ ಜಮೀನು ನೋಟಿಫೈ ಅಥವಾ ಡಿನೋಟಿಫೈ ಆಗುವುದು ವ್ಯಕ್ತಿಯ ಹೆಸರ ಮೇಲೆ ಅಲ್ಲ. ಆ ಜಮೀನಿನ ಸರ್ವೇ ಸಂಖ್ಯೆ ಮೇಲೆ ಎಂದು ಎಂ.ಲಕ್ಷ್ಮಣ್ ಸ್ಪಷ್ಟಪಡಿಸಿದರು.
ಮೈಸೂರು ತಾಲ್ಲೂಕು ದೇವನೂರು ಗ್ರಾಮದ ನಿವಾಸಿ ಜೆ.ದೇವರಾಜ್ ಎಂಬುವರು ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ 3 ಎಕರೆ 16 ಗುಂಟೆ ಜಾಗವನ್ನು ಭೂಸ್ವಾಧೀನದ ಕೈ ಬಿಟ್ಟಿರುವುದರಿಂದ ಪಹಣಿಯಲ್ಲಿ ಮೂಲ ಖಾತೆದಾರರ ಹೆಸರನ್ನು ಕಾಲಂ 9ರಲ್ಲಿ ಇಡುವಂತೆ ಕೋರಿದ್ದಾರೆ. ಈ ಮೂಲಕ ನಿಂಗ ಬಿನ್ ಜವರ ಎಂಬುವರ ಹೆಸರಿನಲ್ಲಿ ನೋಟಿಫಿಕೇಶನ್ ಮಾಡಲಾಗಿದ್ದು, ಅವರ ಹೆಸರಿನಲ್ಲಿ ಡಿನೋಟಿಫಿಕೇಶನ್ ಮಾಡಿ. ಆ ಮೂಲಕ ಯಾವುದೇ ಗೊಂದಲ ಸೃಷ್ಟಿಯಾಗುವುದು ಬೇಡ ಎಂದು ಜೆ.ದೇವರಾಜ್ ಅವರು ಪತ್ರ ಬರೆಯುತ್ತಾರೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಈ ಡಿನೋಟಿಫಿಕೇಶನ್ ಅನ್ನು ನಿಂಗ ಬಿನ್ ಜವರ ಅವರ ಹೆಸರಲ್ಲಿ ಮಾಡಲಾಗಿದೆ. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರ ಆರೋಪ ನೋಡಿದರೆ, ಸಿದ್ದರಾಮಯ್ಯ ಅವರೇ ಹೋಗಿ ಸತ್ತವರ ಹೆಸರಲ್ಲಿ ಡಿನೋಟಿಫಿಕೇಶನ್ ಮಾಡಿ ಸಹಿ ಹಾಕಿ, ಅವರೇ ತಾಲ್ಲೂಕು ಕಚೇರಿಯಲ್ಲಿ ಠಸ್ಸೆ ಹಾಕಿಸಿರುವಂತೆ ಹೇಳುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.
2004ರಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನಸ್ವಾಮಿ ಅವರು ಈ ಜಮೀನು ಖರೀದಿ ಮಾಡಿ 2005ರಲ್ಲಿ ಇದನ್ನು ಕನ್ವರ್ಷನ್‍ಗೆ ಹಾಕುತ್ತಾರೆ. ಇದರಲ್ಲಿ ತಪ್ಪೇನಿದೆ. ಮಲ್ಲಿಕಾರ್ಜುನಸ್ವಾಮಿ ಅವರ ಜಮೀನನ್ನು ಅವರ ಗಮನಕ್ಕೆ ತಾರದೆ ಅದನ್ನು ಬಳಸಿಕೊಂಡು ಲೇಔಟ್ ಮಾಡಿ ಹಂಚಿರುವುದು ಮೂಡಾದವರು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಪಾರ್ವತಮ್ಮ ಅವರಿಗೂ ಮೂಡಾ ಹಗರಣಕ್ಕೂ ತಳುಕು ಹಾಕುವುದು ಬೇಡ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ನಿಜವಾಗಿಯೂ ಹಗರಣ ಯಾವುದೆಂದರೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕುಟುಂಬದ್ದಾಗಿದೆ. ಎಸ್.ಸಿ.ರಾಜೇಶ್ ಬಿನ್ ಚಂದ್ರಪ್ಪ. ಇವರು ಮೈಸೂರಿನವರು. ಇವರು ಯಡಿಯೂರಪ್ಪನವರ ತಂಗಿ ಮಗನಾಗಿದ್ದು, ಇವರು ಒಬ್ಬ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಆ ವ್ಯಕ್ತಿಯಿಂದ 50:50 ಅನುಪಾತದಲ್ಲಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಇನಕಲ್ ಗ್ರಾಮ ಸರ್ವೇ ಸಂಖ್ಯೆ 255/3 ರಲ್ಲಿ 33 ಗುಂಟೆ ಜಮೀನನ್ನು ಪ್ರಾಧಿಕಾರ ಭೂಸ್ವಾಧೀನ ಪಡಿಸಿಕೊಳ್ಳದೆ ಉಪಯೋಗಿಸಿಕೊಂಡಿದ್ದಾರೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಣಯ ದಿನಾಂಕ: 06-11-2020, ಹಾಗೂ ದಿನಾಂಕ 11-02-2015ರ ಅನ್ವಯ ಶೇ.50:50 ಅನುಪಾತದಲ್ಲಿ 8994 ಚದರ ಅಡಿ ನಿವೇಶನವನ್ನು ಬದಲಿ ಪರಿಹಾರವಾಗಿ ಮಂಜೂರು ಮಾಡಿ ಆದೇಶಿಸಿದೆ. ಇಲ್ಲಿ ಯಾವ ರೀತಿ ಅಕ್ರಮ ಮಾಡಲಾಗಿದೆ ಎಂದರೆ, ಪ್ರಸ್ತುತ ಜಮೀನಿನ ಭೂಸ್ವಾಧೀನತೆಗೆ ಸಂಬಂಧಿಸಿದ ಮೂಲ ಕಡತವು ಲಭ್ಯವಿಲ್ಲ ಎಂಬ ಬಗ್ಗೆ ಅಭಿಲೆಕಾಲಯ ನಿರ್ವಾಹಕರಿಂದ ವರದಿ ಪಡೆಯಲಾಗಿದೆ ಎಂದು ಎಂ.ಲಕ್ಷ್ಮಣ್ ದೂರಿದರು.
ಜಾಗವೇ ಇಲ್ಲದೆ, 50:50 ಅನುಪಾತದಲ್ಲಿ ಅಂದಿನ ಮೂಡಾ ಆಯುಕ್ತರು ಇವರಿಗೆ 33 ಗುಂಟೆ ಜಾಗಕ್ಕೆ ಬದಲಿಯಾಗಿ 9 ಸಾವಿರ ಚದರಡಿ ನಿವೇಶನ ನೀಡುತ್ತಾರೆ. ಈ ನಕಲಿ ವ್ಯಕ್ತಿಯಿಂದ ರಾಜೇಶ್ ಬಿನ್ ಚಂದ್ರಪ್ಪ ಅವರು ನಿವೇಶನ ಖರೀದಿ ಮಾಡಿದ್ದಾರೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.