ಬೆಂಗಳೂರು | ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ.ಸಾಲ : ಮೂವರ ಬಂಧನ
ಬೆಂಗಳೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನ ಖರೀದಿಗಾಗಿ 2.32 ಕೋಟಿ ರೂ. ಸಾಲ ಪಡೆದಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಶಿವಣ್ಣ, ಸೈಯ್ಯದ್ ಹಾಶಿಂ ಹಾಗೂ ರಂಗನಾಥ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(ಎಸ್‍ಬಿಐ) ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲತ್ತಹಳ್ಳಿ ವಿಲೇಜ್‍ನಲ್ಲಿರುವ ಆಸ್ತಿಯನ್ನು ಶಿವಣ್ಣ ಎಂಬುವರಿಂದ ಖರೀದಿಸಲು ಸಾಲಕ್ಕಾಗಿ ಎಸ್‍ಬಿಐಗೆ ಅಚ್ಚುಕುಟ್ಟನ್ ಎಂಬುವರು ಅರ್ಜಿ ಸಲ್ಲಿಸಿದ್ದರು. 2023ರ ಜನವರಿಯಲ್ಲಿ 1.16 ಕೋಟಿ ರೂ. ಸಾಲವನ್ನು ಬ್ಯಾಂಕ್ ಮಂಜೂರು ಮಾಡಿತ್ತು ಎನ್ನಲಾಗಿದೆ.
ಮೂರು ಕಂತಿನ ಬಳಿಕ ನಂತರದ ಕಂತುಗಳನ್ನು ಪಾವತಿಸದಿದ್ದಾಗ ಬ್ಯಾಂಕ್‍ನಿಂದ ಅಚ್ಚುಕುಟ್ಟನ್‍ಗೆ ನೋಟಿಸ್ ಜಾರಿಯಾಗಿತ್ತು. ಆದರೆ, ನೋಟಿಸ್ ಸ್ವೀಕೃತವಾಗದಿದ್ದಾಗ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ನಿವೇಶನ ಬೇರೆಯವರ ಹೆಸರಿನಲ್ಲಿರುವುದು ಪತ್ತೆಯಾಗಿತ್ತು.
ಅನುಮಾನಗೊಂಡ ಅಧಿಕಾರಿಗಳು ಪರಿಶೀಲಿಸಿದ್ದು, ಅದೇ ನಿವೇಶನ ಖರೀದಿಯ ಕಾರಣ ನೀಡಿ 2022ರ ಅಕ್ಟೋಬರ್ ನಲ್ಲಿ ಮುಹಮ್ಮದ್ ಫೈಯಾಜ್ ಎಂಬಾತ ಎಸ್‍ಬಿಐನಿಂದಲೇ 1.16 ಕೋಟಿ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಖರೀದಿದಾರರ ತಪ್ಪು ಮಾಹಿತಿಯನ್ನು ಸೈಯದ್ ಹಾಶೀಂ ಎಂಬಾತ ನೀಡಿರುವುದು ಗೊತ್ತಾಗಿದೆ.
ಎಸ್‍ಬಿಐ ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ, ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.