ಮುಡಾದಲ್ಲಿ ನಿವೇಶನ​ ಪಡೆದವರ ಪಟ್ಟಿ ಬಿಡುಗಡೆ | ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದೇನು?

Update: 2024-07-26 17:03 GMT

ಬೆಂಗಳೂರು : ನಿವೇಶನವನ್ನು ಮುಡಾದವರು  ನನಗೆ ಧರ್ಮಕ್ಕೆ ಕೊಡುತ್ತಿಲ್ಲ. ನಾನು 34,000 ರೂ. ಕಟ್ಟಿದ್ದೇನೆ. ಆ ಹಣ ಕಟ್ಟಿ 40 ವರ್ಷಗಳೇ ಆಗಿದೆ. ಇದು ನಿಜವಾದ ಪರಿಸ್ಥಿತಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರ್ಭಟ ನೋಡಿದೆ. ಈ ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿರುವುದು ಎನ್ನುವುದು ನನಗೆ ಗೊತ್ತಿದೆ. ಬೆಂಗಳೂರು ನಗರದಲ್ಲಿ ಈ ಮಹಾಶಯ ಏನೆಲ್ಲಾ, ಯಾವೆಲ್ಲಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ತೆಗೆದರೆ ಅಸಲಿ ಬಂಡವಾಳ ಗೊತ್ತಾಗುತ್ತದೆ ಎಂದು ಹೇಳಿದರು.

ನನ್ನ ಹೆಸರಿನಲ್ಲಿರುವ ನಿವೇಶನವನ್ನು ಬೇಕಿದ್ದರೆ ನೀವೇ ನಿಮ್ಮ ಮಗನಿಗೋ ಅಥವಾ ನಿಮ್ಮ ಧರ್ಮಪತ್ನಿ ಹೆಸರಿಗೋ ಅಥವಾ ನಿಮ್ಮ ಪರಮಾಪ್ತ ಭೈರತಿ ಸುರೇಶ್ ಹೆಸರಿಗೋ ಇಲ್ಲವೇ ಯಾವುದಾದರೂ ಅನಾಥಾಶ್ರಮಕ್ಕೋ ಬರೆದುಕೊಟ್ಟುಬಿಡಿ. ನನಗೆ ಯಾವ ತಕರಾರೂ ಇಲ್ಲ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು.

2012ರಲ್ಲಿ ನಾನು ಮೂಡಾಗೆ ಪತ್ರ ಬರೆದು ಹಂಚಿಕೆ ಮಾಡಿರುವ ನಿವೇಶನ ಕೊಡಿ ಎಂದು ಮನವಿ ಮಾಡಿದ್ದೆ. 2017ರಲ್ಲಿ ಮತ್ತೊಂದು ಪತ್ರವನ್ನೂ ಬರೆದಿದ್ದೆ. ನಾನು ಅಧಿಕಾರ ದುರುಪಯೋಗಪಡಿಸಿಕೊಳ್ಳಲಿಲ್ಲ. ಅಂಥ ಆಲೋಚನೆಯನ್ನೂ ಮಾಡಲಿಲ್ಲ. ನಾನೆಂದೂ ಸಿದ್ದರಾಮಯ್ಯ ಅವರಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ ಎಂದು ಹೇಳಿದರು.

ನಿಂಗಪ್ಪ ಸ್ವರ್ಗದಿಂದ ಬಂದು ಅರ್ಜಿ ಕೊಟ್ಟರಾ? :

ನಿಂಗಪ್ಪ ಎನ್ನುವ ವ್ಯಕ್ತಿ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಎಂದು ಸ್ವರ್ಗದಿಂದ ಇಳಿದು ಬಂದು ನಿಮಗೆ ಅರ್ಜಿ ಕೊಟ್ಟಿದ್ದರಾ ಸಿದ್ದರಾಮಯ್ಯ ಅವರೇ? ನಿಂಗಪ್ಪ ಸತ್ತ ಮೇಲೆ ಡಿನೋಟಿಫಿಕೇಶನ್ ಮಾಡಲು ಅರ್ಜಿ ಸಲ್ಲಿಸಲಾಗಿದೆ. 2001, 2003ರಲ್ಲಿ ಸಿಎಂ ಪತ್ನಿಗೆ ಮೈಸೂರಿನ ವಿಜಯನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. 2005ರಲ್ಲಿ ಕೃಷಿಭೂಮಿ ಎಂದಿದ್ದ ಭೂಮಿಯನ್ನು ಇವರು ಹೇಗೆ ಖರೀದಿ ಮಾಡಿದರು? ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡದೆಯೇ ಭೂ ಪರಿವರ್ತನೆ ಮಾಡಿಕೊಟ್ಟರು. ಅದು ಹೇಗೆ ಮಾಡಿಕೊಟ್ಟರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

"ಮೂಡಾ ಹಗರಣದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲಿವೆ. ಈ ಬಗ್ಗೆ ರೂಪುರೇಷೆ ಸಿದ್ಧ ಮಾಡಲು ಎನ್‍ಡಿಎ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಮುಂದಿನ ಹೋರಾಟ ಮತ್ತು ಪಾದಯಾತ್ರೆ ಬಗ್ಗೆ ನಿರ್ಧಾರ ಮಾಡುತ್ತೆವೆ"

ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News