ಆರೆಸ್ಸೆಸ್‌ಗೆ ಬಿಜೆಪಿ ಸರಕಾರ ನೀಡಿದ ಭೂಮಿಯ ಬಗ್ಗೆ ತನಿಖೆಯಾಗಲಿ : ಮಾವಳ್ಳಿ ಶಂಕರ್
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೊಪ ಮಾಡುತ್ತಾರೆ. ಆದರೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ಯಾಕೆ? ನೀವು ಮಾಡಿದ ಭ್ರಷ್ಟಾಚಾರದಿಂದ, ಆರೆಸ್ಸೆಸ್‍ಗೆ ಬಿಜೆಪಿ ಸರಕಾರ ಎಷ್ಟು ಭೂಮಿ ನೀಡಿದೆ ಅದರ ಕುರಿತು ತನಿಖೆಯಾಗಬೇಕು ಎಂದು ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.
ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಷ್ಟೇ ಪಾದಯಾತ್ರೆ ಮಾಡಿದರೂ, ಸಿದ್ದರಾಮಯ್ಯರ ಒಂದು ಕೂದಲನ್ನು ಅಲುಗಾಡಿಸಲು ಆಗುವುದಿಲ್ಲ. ಸಿದ್ದರಾಮಯ್ಯ ಇರುವವರೆಗೆ ಅಧಿಕಾರ ಈ ನೆಲದ ಮಕ್ಕಳಿಗೆ ದಕ್ಕುತ್ತದೆ ಎಂದರು.
ಕುವೆಂಪು ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಅರೆಜ್ಞಾನ ಪೀಠ ಎಂದು ವೈದಿಕರು ನಿಂದಿಸಿದ್ದರು. ಆದರೆ 20 ಹಾಳೆಯ ನಾಕುತಂತಿಗೆ ಬಂದರೆ ಮಹಾಜ್ಞಾನ ಪೀಠ ಎಂದರು. ಇದು ಚರಿತ್ರೆಯಲ್ಲಾದ ಮಹಾ ದ್ರೋಹ, ಶೋಷಿತರಿಗಾಗಿ ಬದುಕನ್ನು ಮೀಸಲಿಟ್ಟವರನ್ನು ಚರಿತ್ರೆಯಿಂದ ಹೊರಗಿಡಲಾಗಿದೆ. ಅದೇ ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯರನ್ನು ಮುಗಿಸುವ ಕೆಲಸಕ್ಕೆ ಹೋಗುತ್ತಿದ್ದಾರೆ. ಅದು ಪಾಪಿಗಳ ಪಾದಯಾತ್ರೆಯಾಗಿದೆ ಎಂದರು.
ಬಿಜೆಪಿ ಪಾದಯಾತ್ರೆಯಲ್ಲಿ ಇರುವ ಎಲ್ಲರು ಹಿಂದುಳಿದ, ದಲಿತರೆ ಹೆಚ್ಚು, ನಮ್ಮ ಅವಿವೇಕತನದಿಂದ ಅವರು ಕೋಮುವಾದಿಗಳ ಜೊತೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅನೇಕ ಪ್ರಗತಿಪರ ಯೋಜನೆ ಜಾರಿಯಾಗಿವೆ. ವೈದಿಕರು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ. ಆದರೆ ಹಿಂದುಳಿದ ವರ್ಗಕ್ಕೆ ಅಧಿಕಾರಕ್ಕೆ ಹೋದರೆ ಸಹಿಸುವುದಿಲ್ಲ. ಬಾಬಾ ಸಾಹೇಬರು ಮತದಾನದ ಹಕ್ಕಿನ ಮೂಲಕ ರಾಜಕೀಯ ಅಧಿಕಾರ ತೆಗೆದುಕೊಳ್ಳಿ ಎಂದು ಹೇಳಿದ್ದರು. ಆದರೆ ಇಂದು ಜಾತಿ ಜಾತಿಗಳಾಗಿ ವಿಭಜನೆಯಾಗಿದ್ದೇವೆ. ನಮ್ಮಲ್ಲೇ ಜಗಳ ತರುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯಪಾಲರು ಯಾರ ಕೈಗೊಂಬೆಯಾಗಿದಾರೆ ಎನ್ನುವುಯದು ತಿಳಿದಿದೆ. ರಾಜ್ಯ ಸರಕಾರದ ತನಿಖೆಯ ಫಲಿತಾಂಶ ಬರಬೇಕು. ಹಲವು ಕಡೆ ಇ.ಡಿ, ಸಿಬಿಐ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಮುಖ್ಯಮಂತ್ರಿಗಳ ಬಲಿ ತೆಗೆದುಕೊಳ್ಳಲು ಹೊರಟಿರುವ ಮೋದಿ ಸರಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪರಿಷತ್ ಸದಸ್ಯ ನಾಗರಾಜ ಯಾದವ, ಒಕ್ಕೂಟದ ಸಂಚಾಲಕರಾದ ಎಣ್ಣಿಗೆರೆ ವೆಂಕಟರಾಮಯ್ಯ, ಅನಂತನಾಯ್ಕ ಎನ್., ಜಿ.ಡಿ.ಗೋಪಾಲ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಪ್ರಧಾನ ಕಾರ್ಯದರ್ಶಿ ಎಂ.ವಿ.ಸೋಮಶೇಖರ್, ಖಜಾಂಚಿ ಕೆ.ಎಂ.ಕೃಷ್ಣಾ ಮೂರ್ತಿ, ಸದಸ್ಯರಾದ ಸಿ.ನಂಜಪ್ಪ, ಕೆ.ವೆಂಕಟಸುಬ್ಬರಾಜು, ಆದರ್ಶ ಯಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.
‘ಒಬ್ಬ ವ್ಯಕ್ತಿಗಾಗಿ ಈ ಹೋರಾಟ ಅಲ್ಲ. ಸಿದ್ದರಾಮಯ್ಯ ಅವರು ಒಂದು ಶಕ್ತಿ. ಆ ಶಕ್ತಿಯನ್ನು ಉಳಿಸಿಕೊಳ್ಳಬೇಕು. ಶಿವಮೊಗ್ಗ ಹೋಗುವಾಗ ಅಲ್ಲಿ ಕಾಣುವ ಎಲ್ಲ ಜಮೀನು ಯಡಿಯೂರಪ್ಪ ಅವರದ್ದು. ಕಳ್ಳತನ ಮಾಡಿ ಸುಳ್ಳು ಹೇಳಿ ಕಾಂಗ್ರೆಸ್‍ನವರು ಯಾರೂ ಜೈಲಿಗೆ ಹೋಗಿಲ್ಲ. ಸಿದ್ದರಾಮಯ್ಯ ಅವರು ಕೇವಲ ಭಾಗ್ಯಗಳನ್ನು ಮಾತ್ರ ಕೊಟ್ಟಿರುವುದಕ್ಕೆ ಅವರನ್ನು ಬೆಂಬಲಿಸುವುದಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸಂವಿಧಾನ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಜತೆ ಪಾದಯಾತ್ರೆಗೆ ಹೋದವರು ಬಿಜೆಪಿ ನಾಯಕರ ಮಕ್ಕಳಲ್ಲ. ಎಲ್ಲ ಹಿಂದುಳಿದ, ದಲಿತ ಯುವಜನರು ಅವರು ಬಿಜೆಪಿ ಪಾದಯಾತ್ರೆಯಿಂದ ಹೊರಗೆ ಬರಬೇಕು’ ಎಂದು , ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದರು.