ನಿಗದಿತ ಗುರಿ ಸಾಧಿಸದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

Update: 2024-10-29 09:58 GMT

ಬೆಂಗಳೂರು, ಅ.29: ಇನ್ಮೇಲೆ ಪ್ರತಿ ತಿಂಗಳ ಕೊನೆಗೆ ನಾನೇ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ನಿಮ್ಮನ್ನು ಬದಲಾಯಿಸ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿ ಆಯುಕ್ತರುಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ವೇಳೆ ಈ ಸೂಚನೆ ನೀಡಿದರು.

2024-25ನೇ ಸಾಲಿನಲ್ಲಿ ಒಟ್ಟು ಗುರಿ ರೂ.1,10,000 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಅಕ್ಟೋಬರ್ ಅಂತ್ಯದವರೆಗೆ ಒಟ್ಟು ರೂ. 58,773 ಕೋಟಿ ಸಂಗ್ರಹಿಸಲಾಗಿದ್ದು, ಇದರಲ್ಲಿ ಜಿಎಸ್ಟಿ ರೂ. 44,783 ಕೋಟಿ, ಕೆಎಸ್ಟಿ ರೂ. 13,193 ಕೋಟಿ, ವೃತ್ತಿ ತೆರಿಗೆ ರೂ. 797 ಕೋಟಿ ಸೇರಿದೆ ಎಂದರು.

ಅಕ್ಟೋಬರ್ ಕೊನೆಯವರೆಗೆ ಶೇ.53.5 ಗುರಿ ಸಾಧನೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ.5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿರುತ್ತದೆ. ಮುಂದಿನ ಐದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ರೂ.10200ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಇರಿಸಿ ಮಾರ್ಚ್ ಒಳಗಾಗಿ ಸಾಧಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ. ರಾಜ್ಯದ ಅಭಿವೃದ್ಧಿಗೆ ತೆರಿಗೆ ಸಂಗ್ರಹದಲ್ಲಿ ಗುರಿಯನ್ನು ಸಾಧಿಸಬೇಕಿದೆ ಎಂದರು.

ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆಗಾರ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇ ಬಾರದು.

ಕರ ಸಮಾಧಾನ ಯೋಜನೆ ಅಡಿ ರೂ. 2ಸಾವಿರ ಕೋಟಿ ಹೆಚ್ಚುವರಿ ಸಂಗ್ರಹದ ನಿರೀಕ್ಷೆಯಿದೆ ಎಂದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಎ.ಶಿಖಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News