‘ಶಕ್ತಿ ಯೋಜನೆ ನಿಲ್ಲಿಸಲು ಕಳ್ಳನಿಗೊಂದು ಪಿಳ್ಳೆ ನೆವ’ : ಡಿಕೆಶಿ ಹೇಳಿಕೆಗೆ ಆರ್.ಅಶೋಕ್ ಆಕ್ಷೇಪ

Update: 2024-10-31 15:56 GMT

ಬೆಂಗಳೂರು : ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳು ನಿಲ್ಲಲಿವೆ. ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಮಹಿಳೆಯರು ಫೋನ್ ಕರೆ ಮಾಡಿ ಯೋಜನೆ ಬೇಡವೆಂದು ತಿಳಿಸಿದ್ದಾರಂತೆ. ‘ಕಳ್ಳನಿಗೆ ಪಿಳ್ಳೆ ನೆವ’ ಎಂಬಂತೆ, ಯೋಜನೆ ರದ್ದುಪಡಿಸಲು ಈ ರೀತಿ ಕಾರಣ ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಜೊತೆಗೆ ಪಡಿತರ ಚೀಟಿ ರದ್ದು ಮಾಡಲು ಎಲ್ಲ ಬಗೆಯ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಏನು ಬೇಕಾದರೂ ಮಾಡಬಹುದು ಎಂಬಂತೆ ವರ್ತಿಸುತ್ತಿದ್ದಾರೆ. ಇದೀಗ ಅದರ ಮೊದಲ ಹೆಜ್ಜೆಯನ್ನು ಸರಕಾರ ಇರಿಸಿದೆ ಎಂದರು.

ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸರಕಾರವೇ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ.ಹಣ ನೀಡಬೇಕಿದೆ. ಖಜಾನೆ ಪೂರ್ಣ ಖಾಲಿಯಾಗಿದೆ. ಇಷ್ಟಾದರೂ ಯಾವ ಮುಖ ಇಟ್ಟುಕೊಂಡು ಉಪಚುನಾವಣೆ ಎದುರಿಸಲು ಮುಂದಾಗಿದ್ದಾರೆಂದು ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಒಮ್ಮೆಯೂ ಚನ್ನಪಟ್ಟಣಕ್ಕೆ ಭೇಟಿ ನೀಡಿಲ್ಲ. ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ವಹಿಸಿಕೊಂಡು ಕಮಿಶನ್ ಪಡೆಯುತ್ತಿದ್ದಾರೆ. ರಾಮಲಿಂಗಾರೆಡ್ಡಿ ಬೆಂಗಳೂರು ಉಸ್ತುವಾರಿ ಸಿಗಲು ಕಾಯುತ್ತಿದ್ದಾರೆ. ಜನರು ಈ ಸರಕಾರವನ್ನು ತಿರಸ್ಕರಿಸಲಿದ್ದಾರೆ ಎಂದರು.

ಪ್ರತಿಭಟನೆ: ‘ರೈತರ ಜಮೀನು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ನ.4ರಿಂದ ತೀವ್ರ ಹೋರಾಟ ಆರಂಭಿಸಲಾಗುವುದು. ವಿಜಯಪುರದ ಬಳಿಕ ಕೋಲಾರದಲ್ಲಿ ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ. ನಾಗಮಂಗಲ, ಚನ್ನಪಟ್ಟಣ, ಬೆಳಗಾವಿ ಮೊದಲಾದ ಕಡೆಗಳಲ್ಲಿ ರೈತರ ಜಮೀನುಗಳನ್ನು ಕೊಳ್ಳೆ ಹೊಡೆಯಲು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಆರಂಭಿಸಿದೆ ಎಂದರು.

ಭೂಗಳ್ಳರು ಮಾತ್ರವಲ್ಲದೆ, ಸರಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ. ಇದರ ವಿರುದ್ಧ ರೈತ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಬೇಕು. ಹಿಂದೆ ಮುಸ್ಲಿಮ್ ರಾಜರು ದಾಳಿ ಮಾಡಿ, ಮತಾಂಧತೆ ಮೆರೆದಿದ್ದರು. ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಮತಾಂತರ ಮಾಡಿರುವುದು ಇದಕ್ಕೆ ಸಾಕ್ಷಿ. ಇದೇ ರೀತಿ ಈಗ ಜಮೀನಿನ ಕಬಳಿಕೆ ನಡೆಯುತ್ತಿದೆ. ಇಂತಹವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಸುತ್ತಿದ್ದಾರೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News