5, 8 ಮತ್ತು 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅವಕಾಶ
ಬೆಂಗಳೂರು : 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಎಸ್‍ಎ-2 ಮೌಲ್ಯಾಂಕನದ ಫಲಿತಾಂಶವನ್ನು ಪ್ರಕಟಿಸುವ ಕುರಿತಾಗಿ ಸುಪ್ರಿಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ ಎಫ್‍ಎ ಮತ್ತು ಎಸ್‍ಎ-1ಗಳ ಮೌಲ್ಯಾಂಕನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸೋಮವಾರದಂದು ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಜ್ಞಾಪನ ಪತ್ರವನ್ನು ಹೊರಡಿಸಿದ್ದು, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಎಸ್‍ಎ-2 ಮೌಲ್ಯಾಂಕನ ಕಾರ್ಯ ಮುಗಿದಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲು ತಿಳಿಸಲಾಗಿರುತ್ತದೆ. ಆದರೆ ಫಲಿತಾಂಶವನ್ನು ಪ್ರಕಟಿಸಲು ಸುಪ್ರಿಂ ಕೋರ್ಟ್ ತಡೆಯಾಜ್ಞೆಯನ್ನು ನೀಡಿದ್ದು, ಅಂತಿಮ ತೀರ್ಪು ಬಾಕಿ ಇರುತ್ತದೆ ಎಂದಿದ್ದಾರೆ.
ಪ್ರಸ್ತುತ 2023-24ನೆ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ಮೇ 29ರಿಂದ 2024- 25ನೆ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. 2023-24ನೆ ಸಾಲಿನಲ್ಲಿ ವ್ಯಾಸಂಗ ಮಾಡಿದ 5, 8 ಮತ್ತು 9ನೆ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದೇ ಇರುವುದರಿಂದ ಅವರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು, ಪ್ರವೇಶ ಶುಲ್ಕ ಪಾವತಿಸಲು ಹಾಗೂ ಬೇರೆ ಸ್ಥಳಗಳಿಗೆ ವರ್ಗಾವಣೆ ಹೊಂದಿರುವ ಪ್ರಯುಕ್ತ ಮಕ್ಕಳ ವರ್ಗಾವಣೆ ಪ್ರಮಾಣಪತ್ರ ಪ್ರಗತಿ ಪತ್ರ ಮತ್ತು ವ್ಯಾಸಂಗ ಪ್ರಮಾಣಪತ್ರಗಳನ್ನು ವಿತರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.