ರಾಜೀನಾಮೆ ನೀಡಲು ಹಿಂದೆ-ಮುಂದೆ ನೋಡುವುದಿಲ್ಲ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ

Update: 2024-07-01 13:14 GMT

ಬೆಂಗಳೂರು: ‘ನಾನು ರಾಜೀನಾಮೆ ನೀಡಲು ಹಿಂದೆ-ಮುಂದೆ ನೋಡುವುದಿಲ್ಲ. ಗೌರವ ಇಲ್ಲದ ಕಡೆಯಲ್ಲಿ ನಾನು ಯಾವುದೇ ಕಾರಣಕ್ಕೂ ಇರಲು ಇಚ್ಛಿಸುವುದಿಲ್ಲ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಎಚ್ಚರಿಸಿದ್ದಾರೆ.

ಸೋಮವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಂಡಳಿಯಲ್ಲಿನ ಕಾಮಗಾರಿ ಟೆಂಡರ್, ಅನುದಾನ ಹಂಚಿಕೆ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಜತೆ ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಅಂತಹ ಸಂದರ್ಭ ಬಂದರೆ ದುರಾಡಳಿತವನ್ನು ಸಹಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮಂಡಳಿಯಲ್ಲಿ ದುರಾಡಳಿತ ನಡೆಯುತ್ತಿದೆ. ಆ ನಿಮಗಕ್ಕೆ ನಾನು ಮುಖ್ಯಸ್ಥ, ಆದರೆ ಅಲ್ಲಿ ವ್ಯವಸ್ಥೆ ಸರಿಯಿಲ್ಲ. ಅಲ್ಲಿ ಪರಿಶೀಲನೆ ಮಾಡುವ ಹಕ್ಕು ಇಲ್ಲದಂತಹ ದುರಾಡಳಿತ ನಡೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ನೋಡುತ್ತಿದ್ದೇವೆ. ಅದಕ್ಕಿಂತ ಕೆಟ್ಟ ವ್ಯವಸ್ಥೆ ಆಗುವುದು ಬೇಡ. ಹೀಗಾಗಿ ನಾನು ಕ್ರಮಕ್ಕೆ ಕೋರಿ ಪತ್ರವನ್ನು ಬರೆದಿದ್ದೇನೆ ಎಂದರು.

ಯಾವ ಕಂಪೆನಿಗಳು ಅಕ್ರಮ ನಡೆಸಿವೆಯೋ ಅಂತಹ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಿ. ತನಿಖೆಗೆ ಆಗ್ರಹಿಸಿ ನಾನು ಪತ್ರ ಬರೆದು ಎರಡೂವರೆ ತಿಂಗಳು ಆಗಿದೆ. ಇದರಲ್ಲಿ 10-15 ಕಂಪೆನಿಗಳು ಇವೆ. ಸಚಿವರಿಗೆ ಬೇಡವಾದ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಹಾಕುವುದು, ಆಪ್ತರ ಕಂಪೆನಿಗಳಿಗೆ ಟೆಂಡರ್ ಆಗುವುದು ಬೇಡ ಎಂದು ಅವರು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News