ವಿರೋಧ ಪಕ್ಷಗಳು ಎಷ್ಟೋ ಮನೆ ಮುರಿಯುವ ಕೆಲಸ ಮಾಡಿವೆ: ಡಿ.ಕೆ.ಶಿವಕುಮಾರ್

Update: 2024-11-01 09:28 GMT

ಬೆಂಗಳೂರು, ನ.1: "ನಾವು ಜಾರಿಗೆ ತಂದಿರುವ ಜನಪರ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರಿಂದ ಮಾಡಲು ಆಗಲಿಲ್ಲ.ಅಕ್ಕ-ತಂಗಿ, ತಂದೆ-ಮಗ, ಅಪ್ಪ-ಮಕ್ಕಳ ನಡುವೆ ಜಗಳ ತಂದಿಟ್ಟು, ಭಾವನೆಗಳ ಮೇಲೆ ಆಟವಾಡುವುದೇ ಅವುಗಳ ಕೆಲಸ. ಹೀಗೆ ಮಾಡಿ ಎಷ್ಟೋ ಮನೆಗಳನ್ನು ಒಡೆದು ಹಾಕಿವೆ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತರಾಟೆಗೈದರು.

ಕಂಠೀರವ ಸ್ಟೇಡಿಯಂ ಬಳಿ ಇಂದು ಮಾಧ್ಯಮದವರ ಪ್ರಶ್ನೆಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ವಿಚಾರವಾಗಿ ಗುರವಾರ ಪ್ರಸ್ತಾಪಿಸಿದ ಮಾತುಗಳ ಬಗ್ಗೆ ಕೇಳಿದಾಗ, "ವಿರೋಧ ಪಕ್ಷದವರಿಗೆ ರಾಜಕೀಯ ಹೊರತಾಗಿ ಯಾವ ವಿಚಾರಗಳೂ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಸಂಸಾರಗಳನ್ನು ಹಾಳು ಮಾಡುತ್ತವೇ ಎಂದು ಹೇಳಿದ್ದರು. ಆದರೆ ಅವರು ಹೇಳಿದಂತೆ ಆಗಲಿಲ್ಲ. ನಮ್ಮ ಕೆಲಸಗಳನ್ನು ನೋಡಿ, ಹೊಟ್ಟೆಕಿಚ್ಚು ಪಡುತ್ತಿದ್ದಾರೆ" ಎಂದರು.

ಹಿರಿಯರ ಬುದ್ಧಿ ಮಾತು ಕೇಳಬೇಕು

"ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಅವರು ಬುದ್ಧಿಮಾತು ಹೇಳಿದರೆ ನಾವು ಕೇಳಬೇಕು. ನಾನು ಶಕ್ತಿ ಯೋಜನೆ ವಿಚಾರವಾಗಿ ಹೇಳಿರುವ ಮಾತುಗಳನ್ನು ಮತ್ತೊಮ್ಮೆ ಎಲ್ಲರು ಕೇಳಿಸಿಕೊಂಡು ನೋಡಿ" ಎಂದರು.

ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ

"ಶಕ್ತಿ ಯೋಜನೆ ಕುರಿತು ಶೇ. 5-10ರಷ್ಟು ಮಹಿಳೆಯರ ಅಭಿಪ್ರಾಯಗಳನ್ನು ನಾನು ಹೇಳಿದನೇ ಹೊರತು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಒಂದಷ್ಟು ಜನ ಮಹಿಳೆಯರು ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೂ ಬಸ್ ನಿರ್ವಾಹಕರು ಹಣ ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದೆ ಅಷ್ಟೇ" ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಮತ್ತು ಪಕ್ಷ ಅಚ್ಚುಕಟ್ಟಾಗಿ ನಡೆಯುತ್ತಿದೆ

ಮಲ್ಲಿಕಾರ್ಜುನ ಖರ್ಗೆ ಅವರು ಒಗ್ಗಟ್ಟಾಗಿ ಇರಿ ಎನ್ನುವ ಸಂದೇಶ ಕೊಟ್ಟಿದ್ದು ಯಾವ ಕಾರಣಕ್ಕೆ ಎಂದು ಕೇಳಿದಾಗ, "ಅವರು ವಿವಿಧ ಸಂದರ್ಭಗಳನ್ನು ವಿವರಿಸಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ನಾನು ಅಧ್ಯಕ್ಷನಾದ ಹಾಗೂ ಡಿಸಿಎಂ ಆದ ನಂತರ ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಿವೆಯೇ? ನಾವುಗಳು ಅಚ್ಚುಕಟ್ಟಾಗಿ ಸರ್ಕಾರ ಹಾಗೂ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ" ಎಂದರು.

ಒಂದಷ್ಟು ನಾಯಕರು ದೆಹಲಿಗೆ ಬಂದು ಭೇಟಿ ಮಾಡುತ್ತಿರುವ ಬಗ್ಗೆ ಖರ್ಗೆ ಅವರು ಪ್ರಸ್ತಾಪಿಸಿದ ಬಗ್ಗೆ ಕೇಳಿದಾಗ, "ಯಾರೂ ದಿಲ್ಲಿಗೆ ತೆರಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಯಾವುದೇ ವಿಚಾರದಲ್ಲೂ ಮಧ್ಯಪ್ರವೇಶ ಮಾಡಿಲ್ಲ. ಇದುವರೆಗೂ ಇಂತಹ ಘಟನೆ ನಡೆದಿಲ್ಲ. ಅವರು ಹಿರಿಯರಾಗಿ ಸಲಹೆ ನೀಡಿದ್ದಾರೆ. ರಾಷ್ಟ್ರ ರಾಜಕಾರಣದ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ. ಮೀಸಲಾತಿ ವಿಚಾರವಾಗಿ ಒಂದೊಂದು ರಾಜ್ಯ ಒಂದೊಂದು ನೀತಿ ಅಳವಡಿಸಿಕೊಂಡಿವೆ. ಸ್ಥಳೀಯವಾಗಿ ನಿಮ್ಮ ನೀತಿಯನ್ನು ನೀವು ನಿರೂಪಿಸಿಕೊಳ್ಳಿ. ಅದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಅವರು ಹೇಳಿದ್ದಾರೆ" ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ

ಮಹಾರಾಷ್ಟ್ರದಲ್ಲಿಯೂ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಕೇಳಿದಾಗ, "ಕರ್ನಾಟಕ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು, ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿವೆ. ಬಿಜೆಪಿ ಹಾಗೂ ಇತರೇ ಪಕ್ಷಗಳ ಆಡಳಿತವಿರುವ ರಾಜ್ಯಗಳು ಸಹ ನಮ್ಮದೇ ಯೋಜನೆಗಳನ್ನು ಅನುಕರಿಸಿವೆ. ಇದು ನಮಗೆ ಹೆಮ್ಮೆ ಹಾಗೂ ಗರಿಮೆಯ ವಿಚಾರ" ಎಂದು ಹೇಳಿದರು.

ಯತ್ನಾಳ್ ಮಾನಸಿಕ ಅಸ್ವಸ್ಥ

ವಕ್ಫ್ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿಗೆ ಪತ್ರ ಬರೆದಿರುವ ವಿಚಾರ ಕೇಳಿದಾಗ, "ಮಾನಸಿಕವಾಗಿ ಅಸ್ವಸ್ಥರಾಗಿರುವ, ಹುಚ್ಚಾಸ್ಪತ್ರೆ ಸೇರಬೇಕಿರುವ ವ್ಯಕ್ತಿಗಳ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News