ಜುಲೈ ಅಂತ್ಯದವರೆಗೂ ಒಟಿಎಸ್‍ಗೆ ಅವಕಾಶ: ಡಿ.ಕೆ. ಶಿವಕುಮಾರ್

Update: 2024-06-11 13:35 GMT

ಬೆಂಗಳೂರು: ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಬಿಬಿಬಿಎಂಪಿ ನೀಡಿರುವ ಒನ್ ಟೈಮ್ ಸೆಟ್ಲಮೆಂಟ್ (ಒಟಿಎಸ್) ಅವಕಾಶ ಜುಲೈ 31ರವರೆಗೆ ಮಾತ್ರ ಇರಲಿದ್ದು, ಶೀಘ್ರವಾಗಿ ತೆರಿಗೆ ಪಾವತಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗಳು ನಡೆಯುತ್ತಿದ್ದ ಕಾರಣ ತೆರಿಗೆ ಪಾವತಿ ವಿಚಾರದಲ್ಲಿ ಪಾಲಿಕೆ ಒತ್ತಡ ಹಾಕಿರಲಿಲ್ಲ. ಆಸ್ತಿ ತೆರಿಗೆ ಕಟ್ಟದವರಿಗೆ ತೆರಿಗೆ ವ್ಯಾಪ್ತಿಯಲ್ಲಿ ಬರಲು ಪಾಲಿಕೆ ವತಿಯಿಂದ ನೀಡಿರುವ ಒನ್ ಟೈಮ್ ಸೆಟ್ಲಮೆಂಟ್ ಅವಕಾಶವನ್ನು ಜುಲೈ 31ಕ್ಕೆ ಅಂತಿಮಗೊಳಿಸಲಾಗುವುದು. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದರು.

ಇನ್ನೂ, ಈ ಅವಕಾಶದಲ್ಲಿ ದಂಡದ ಮೇಲೆ ಶೇ.50 ರಷ್ಟು ವಿನಾಯಿತಿ ನೀಡಿದ್ದು, ಶೇ.100ರಷ್ಟು ಬಡ್ಡಿ ಮನ್ನಾ ಕೂಡ ಮಾಡಲಾಗಿದೆ. ಬಿಜೆಪಿ ಸರಕಾರ ತರಾತುರಿಯಲ್ಲಿ ಜಾರಿಗೆ ತಂದ ಕಾಯ್ದೆ. ನಮ್ಮ ಸರಕಾರ ಇದನ್ನು ಸರಿಪಡಿಸಲು ಮುಂದಾಗಿದೆ. ನಾಗರಿಕರು ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

20 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ಅನೇಕರು ಹೊರಗಿದ್ದಾರೆ. ತೆರಿಗೆ ಪಾವತಿಸಲು ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ತೆರಿಗೆ ಪಾವತಿಸಿ 90 ದಿನದೊಳಗೆ ಸೂಕ್ತ ದಾಖಲೆ ಕೊಟ್ಟರೆ ಅವರಿಗೆ ಸೂಕ್ತ ಖಾತೆ ನೀಡಲಾಗುವುದು. ಜತೆಗೆ, 4 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈಗಾಗಲೇ 50 ಸಾವಿರ ಮಂದಿ ಈ ಅವಕಾಶ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿದ್ದಾರೆ ಎಂದ ಅವರು, ಆಗಸ್ಟ್ 1ರಿಂದ ತೆರಿಗೆ ಪಾವತಿಸದಿದ್ದರೆ ಬಾಕಿ ಪಟ್ಟಿಗೆ ಸೇರುತ್ತಾರೆ. ಹೀಗಾಗಿ ಜುಲೈ 31ರ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿ. ಸದ್ಯದ ಲೆಕ್ಕಾಚಾರದ ಪ್ರಕಾರ 5200 ಕೋಟಿಯಷ್ಟು ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ ನಮಗೆ 1300 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದು ವಿವರಿಸಿದರು.

ಡಿಜಿಟಲೀಕರಣ ಪೂರ್ಣ: 20 ಲಕ್ಷ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮಾಡಲಾಗುತ್ತಿದೆ. ಈ ಆಸ್ತಿ ಮಾಲಕರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು. 20 ಲಕ್ಷ ಆಸ್ತಿಗಳ ಪೈಕಿ 8 ಲಕ್ಷ ಆಸ್ತಿಗಳ ದಾಖಲೆಗಳು ಡಿಜಿಟಲೀಕರಣವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಉಳಿದ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News