ಶಾಸಕ ಗೋಪಾಲಯ್ಯಗೆ ಕೊಲೆ ಬೆದರಿಕೆವೊಡ್ಡಿದ ಪದ್ಮರಾಜ್ ಬಂಧನ: ಜಿ.ಪರಮೇಶ್ವರ್
ಬೆಂಗಳೂರು: ಬಿಜೆಪಿ ಶಾಸಕ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆವೊಡ್ಡಿರುವ ಬಿಬಿಎಂಪಿ ಮಾಜಿ ಸದಸ್ಯ ಪದ್ಮರಾಜ್ ಎಂಬುವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕೊಲೆ ಬೆದರಿಕೆ ಹಾಕಿರುವ ವಿಚಾರ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಇಡೀ ಸದನ ಬಿಜೆಪಿ ಸದಸ್ಯ ಗೋಪಾಲಯ್ಯ ಪರ ನಿಂತು, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಸ್ಪೀಕರ್ ಯು.ಟಿ.ಖಾದರ್, ‘ಶಾಸಕರಿಗೆ ಕೊಲೆ ಬೆದರಿಕೆ ಹಾಕಿರುವುದು ಗಂಭೀರ ವಿಚಾರ. ಬೆದರಿಕೆ ಹಾಕಿರುವ ವ್ಯಕ್ತಿಗೆ ಕಠಿಣ ಸಂದೇಶ ಹೋಗಬೇಕು. ಕೂಡಲೇ ಆತನನ್ನು ಬಂಧಿಸಿ ಇಲ್ಲವೇ ಸಂಬಂಧಪಟ್ಟ ಇನ್ಸ್ ಪೆಕ್ಟರ್ ಅಮಾನತು ಮಾಡಬೇಕು’ ಎಂದು ರೂಲಿಂಗ್ ನೀಡಿದರು.
ಶಾಸಕರ ಕೊಲೆ ಬೆದರಿಕೆ ವಿಚಾರ ಕಾವೇರಿದ ಚರ್ಚೆ ಬಳಿಕ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ‘ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಬಿಬಿಎಂಪಿಯ ಮಾಜಿ ಸದಸ್ಯ ಪದ್ಮರಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ಸದನಕ್ಕೆ ಮಾಹಿತಿ ನೀಡಿದರು.
ಆರಂಭದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ಗೋಪಾಲಯ್ಯ, ‘ಮಂಗಳವಾರ ತಡರಾತ್ರಿ ಬಿಬಿಎಂಪಿ ಮಾಜಿ ಸದಸ್ಯ ಪದ್ಮರಾಜ್, ತಮಗೆ ದೂರವಾಣಿ ಕರೆ ಮಾಡಿ ಹಣ ನೀಡುವಂತೆ ಬೆದರಿಸಿದರು. ಇದಕ್ಕೆ ಒಪ್ಪದ ಕಾರಣ ಅವಾಚ್ಯವಾಗಿ, ಕೆಟ್ಟದಾಗಿ ಮಾತನಾಡಿದಲ್ಲದೆ, ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ’ ಎಂದು ಸದನಕ್ಕೆ ತಿಳಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸದೇ, ರಾಜಾತಿಥ್ಯ ನೀಡಲಾಗುತ್ತಿದೆ. ಜನಪ್ರತಿನಿಧಿಗಳಿಗೆ ಈ ರೀತಿ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು. ಈತನಿಗೆ ನೀಡುವ ಶಿಕ್ಷೆ ಇಡೀ ರಾಜ್ಯಕ್ಕೆ ಮಾದರಿಯಾಗಿ ಮುಂದೆ ಈ ರೀತಿ ಯಾರೂ ಬೆದರಿಕೆ ಹಾಕದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.