ಸಂಸತ್‍ನಲ್ಲಿ ‘ಗ್ಯಾಸ್ ಬಾಂಬ್ ಪ್ರಕರಣ’ದಿಂದಲೇ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದೆ: ಸಚಿವ ರಾಮಲಿಂಗಾರೆಡ್ಡಿ

Update: 2024-03-14 15:06 GMT

ಬೆಂಗಳೂರು: ಸಂಸತ್ ಭವನದೊಳಗೆ ಗ್ಯಾಸ್ ಬಾಂಬ್ ಹಾಕಿದವರಿಗೆ ಪಾಸ್ ಕೊಟ್ಟಿರುವ ಕಾರಣದಿಂದಲೇ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಿತ್ತು. ಏಕೆಂದರೆ ಸಂಸತ್ ಭವನದೊಳಗೆ ಗ್ಯಾಸ್ ಬಾಂಬ್ ಹಾಕಿದವರಿಗೆ ಇವರೇ ಪಾಸ್ ನೀಡಿದ್ದರು. ಜತೆಗೆ, ನಮ್ಮ ಸರಕಾರದ ವಿರುದ್ಧ ಕೇವಲ ವಿರೋಧ ಮಾಡಬೇಕೆನ್ನುವ ಕಾರಣದಿಂದಲೇ ಪ್ರತಾಪ್ ಸಿಂಹ ಅನಗತ್ಯ ಹೇಳಿಕೆ ನೀಡುತ್ತಿದ್ದರು ಎಂದರು.

ಮೈಸೂರಿನ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಪಕ್ಷದ ದುಡಿದ ಹಲವಾರು ನಾಯಕರಿದ್ದರು. ಆದರೆ ರಾಜ ಮನೆತನದವರಿಗೆ ಕರೆದು ಟಿಕೆಟ್ ನೀಡಿದ್ದಾರೆ. ಇದರಿಂದ ಬಿಜೆಪಿ ದಿವಾಳಿಯಾಗಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಅವರು ಟೀಕಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಸಮರ್ಥರಿದ್ದಾರೆ. ನಾನು ರಾಮನಗರ ಜಿಲ್ಲಾ ಮಂತ್ರಿಯಾಗಿರುವುದರಿಂದ ಪ್ರಚಾರಕ್ಕೆ ಹೋಗುತ್ತೇನೆ. ಅದೇ ರೀತಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಪ್ರಕಟಿಸಿದ ನಂತರ ಅಲ್ಲೂ ಪ್ರಚಾರ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಬೈದರೆ ಶಹಬಾಶ್ ಗಿರಿ ಸಿಗಲ್ಲ: ಪ್ರತಾಪ್ ಸಿಂಹ ನನಗೆ ಒಳ್ಳೆಯ ಗೆಳೆಯರು. ಆದರೆ, ಈ ಬಾರಿ ಅವರಿಗೆ ಟಿಕೆಟ್ ತಪ್ಪಿರುವುದಕ್ಕೆ ಬೇಸರ ಆಗಿದೆ. ಪಕ್ಷಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೈದರೆ ಶಹಬಾಶ್ ಗಿರಿ ಸಿಗುತ್ತದೆಂದು ಅವರು ತಿಳಿದುಕೊಂಡಿದ್ದರೂ, ಏನೋ ಗೊತ್ತಿಲ್ಲ. ಆದರೆ, ಅವರ ವಿಚಾರದಲ್ಲಿ ನನಗೆ ತುಂಬಾ ದುಃಖ ಇದೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟೀಕಿಸಿದರು.

ಉತ್ತಮ ಉದಾಹರಣೆ: ಸಮುದಾಯ, ನಾಯಕರ ಕುರಿತು ಕೀಳಾಗಿ ಮಾತನಾಡುವವರಿಗೆ ಬಿಜೆಪಿ ಪ್ರತಾಪ್ ಸಿಂಹ ಅವರಂತೆಯೇ ರಾಜಕೀಯ ಪೆಟ್ಟು ಬೀಳಲಿದ್ದು, ಇವರೇ ಉತ್ತಮ ಉದಾಹರಣೆ. ಪ್ರತಾಪ್ ಸಿಂಹಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಚಾಮುಂಡೇಶ್ವರಿ ತಾಯಿ ಮುಂದೆ ಅವರಿಗೆ ಸದ್ಬುದ್ಧಿ ಕೊಡಲಿ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News