ಎಸ್.ಎಂ.ಕೃಷ್ಣ ನಿಧನಕ್ಕೆ ಪ್ರಧಾನಿ, ಮುಖ್ಯಮಂತ್ರಿ ಸಹಿತ ಗಣ್ಯರ ಸಂತಾಪ

Update: 2024-12-10 04:55 GMT

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಕೇಂದ್ರದ ಮಾಜಿ ಸಚಿವರೂ ಆಗಿದ್ದ ಎಸ್.ಎಂ.ಕೃಷ್ಣ ನಗರದ ಸದಾಶಿವ ನಗರದ ಸ್ವಗೃಹದಲ್ಲಿ ಇಂದು ಮುಂಜಾವ 2:30 ರ ಸುಮಾರಿಗೆ ನಿಧನರಾದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

"ಎಸ್.ಎಂ.ಕೃಷ್ಣ ಉತ್ತಮ ನಾಯಕರಾಗಿದ್ದರು. ಸಮಾಜದ ಎಲ್ಲ ವರ್ಗಗಳ ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನ ಸುಧಾರಣೆಗಾಗಿ ದಣಿವರಿಯರಿದ ಶ್ರಮಿಸಿದ್ದರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷವಾಗಿ ಗಮನಹರಿಸಿದ್ದರು" ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು.ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮಖ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ' ಎಂದು ಸಿದ್ದರಾಮಯ್ಯ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

"ಆತ್ಮೀಯರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರ ನಿಧನದಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಕರ್ನಾಟಕದ ಪ್ರಗತಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೂ ಸೂಕ್ತ ಮಾರ್ಗದರ್ಶನ ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.

"ರಾಜ್ಯದ ವಿಧಾನಸಭಾಧ್ಯಕ್ಷರು, ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಅನುಪಮ ಕೊಡುಗೆ ನೀಡಿದ್ದ ಹಿರಿಯರು, ಮುತ್ಸದ್ದಿಗಳಾದ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವುಂಟಾಯಿತು. ವೈಯಕ್ತಿಕವಾಗಿ ನನಗೆ ಅವರ ಅಗಲಿಕೆ ಬಹಳ ದುಃಖ ಉಂಟು ಮಾಡಿದೆ. ಆ ಚೇತನಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ರಾಜ್ಯದ ಜನತೆಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ. ಎಸ್. ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಉತ್ತರ ಕನ್ನಡ ಜಿಲ್ಲಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News