ಪ್ರಧಾನಿ ಮೈಸೂರು ಪ್ರವಾಸ | ಹೊಟೇಲ್ ಬಿಲ್ ಬಾಕಿ ಸೌಹಾರ್ದಯುತ ಇತ್ಯರ್ಥ : ಸಚಿವ ಈಶ್ವರ್ ಖಂಡ್ರೆ

Update: 2024-05-25 12:36 GMT

ಬೆಂಗಳೂರು : ಕಳೆದ ವರ್ಷ ಎಪ್ರಿಲ್‍ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‍ಟಿಸಿಎ) ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ ‘ಹುಲಿ ಯೋಜನೆ-50’ ಕಾರ್ಯಕ್ರಮಕ್ಕೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರ ಆತಿಥ್ಯದ ಬಿಲ್ ಬಾಕಿಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕಳೆದ ಎಪ್ರಿಲ್ ನಲ್ಲಿ ಈ ಕಾರ್ಯಕ್ರಮ ನಡೆದಾಗ, ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯ ಸರಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್.ಟಿ.ಸಿ.ಎ. ಕಾರ್ಯಕ್ರಮವಾಗಿತ್ತುʼ ಎಂದರು.

ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು. ವಾಸ್ತವವಾಗಿ ಈ ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್.ಟಿ.ಸಿ.ಎ. ಹೇಳಿತ್ತು ಎಂದು ಈಶ್ವರ್ ಖಂಡ್ರೆ ವಿವರಿಸಿದರು.

ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ 6.33 ಕೋಟಿ ರೂ. ಈ ಪೈಕಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3.33 ಕೋಟಿ ರೂ. ಬಾಕಿ ಬರಬೇಕಿದೆ. ಇದರಲ್ಲಿ ರಾಡಿಸನ್ ಬ್ಲೂ ಆತಿಥ್ಯವೆಚ್ಚ ಸುಮಾರು 80 ಲಕ್ಷ ರೂ. ಸೇರಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಈ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಫೋನ್ ಮಾಡಿದ್ದರೂ ಎನ್.ಟಿ.ಸಿ.ಎ. (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಈ ಬಾಕಿ ಹಣ ನೀಡಿಲ್ಲ. ಈಗ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News