ಆರಂಭದಲ್ಲೇ ಕ್ಯಾನ್ಸರ್ ಪತ್ತೆಹಚ್ಚಲು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸ್ಕ್ರೀನಿಂಗ್ ಗೆ ಆದ್ಯತೆ: ಸಚಿವ ದಿನೇಶ್ ಗುಂಡೂರಾವ್

Update: 2024-02-04 06:56 GMT

ಬೆಂಗಳೂರು: ಆರಂಭದಲ್ಲೇ ಕ್ಯಾನ್ಸರ್ ಪತ್ತೆಹಚ್ಚುವ ನಿಟ್ಟಿನಲ್ಲಿ ಹೆಚ್ಚಿನ ತಪಾಸಣೆ ಅವಶ್ಯಕತೆಯಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಗೆ ಒತ್ತು ನೀಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ "ಕ್ಯಾನ್ ವಾಕ್ -2024" ಕ್ಯಾನ್ಸರ್ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡು ಮಾತನಾಡುತ್ತದ್ದರು.

ಆರೋಗ್ಯ ಇಲಾಖೆ ಹಾಗೂ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು, ಜೆಎಸ್ ಕ್ಯಾನ್ಸರ್ ಫೌಂಡೇಶನ್, ನವೋದಯ ಇನ್ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಕ್ಯಾನ್ ವಾಕ್' ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ನಿಯಮಿತ ವ್ಯಾಯಾಮ, ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಸೇರಿದಂತೆ ಆರೋಗ್ಯಪೂರ್ಣ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ. ಜನರು ಕ್ಯಾನ್ಸರ್ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.

"ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕೈ ಜೋಡಿಸಿ" ಘೋಷವಾಕ್ಯದಡಿಯಲ್ಲಿ 5 ಕಿಲೋಮೀಟರ್ ವರೆಗೆ ವಾಕಥಾನ್ ನಡೆಸಲಾಯಿತು. ನಡಿಗೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರ ಜೊತೆ ನಟ ಪ್ರೇಮ್, ಅಭಿಜಿತ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಎನ್.ಎಚ್.ಎಮ್ ಎಂ.ಡಿ ನವೀವ್ ಭಟ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹೆಜ್ಜೆ ಹಾಕಿದರು. ಮುಂಜಾನೆಯೇ 10 ಸಾವಿರಕ್ಕೂ ಹೆಚ್ಚು ಜನರು ಕ್ಯಾನ್ಸರ್ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡು, ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗೋಣ ಎಂಬ ಘೋಷವಾಕ್ಯಗಳನ್ನು ಮೊಳಗಿಸಿದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News