ಪ್ರಜ್ವಲ್ ಲೈಂಗಿಕ ಹಗರಣ | 100 ಕೋಟಿ ರೂ.ಆಫರ್ ಬಗ್ಗೆ ದೇವರಾಜೇಗೌಡ ಅವರು ಅಮಿತ್ ಶಾಗೆ ಏಕೆ ಹೇಳಲಿಲ್ಲ? : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 100 ಕೋಟಿ ರೂ.ಗಳ ಆಫರ್ ಇತ್ತು ಎಂಬ ಮಾಹಿತಿಯನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಶಾ ಅವರಿಗೆ ಯಾಕೆ ಹೇಳಲಿಲ್ಲ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿರುವ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‍ನಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "5 ಕೋಟಿ ರೂ.ಹಣವನ್ನು ಮುಂಗಡವಾಗಿ ಕೊಟ್ಟರು ಎಂದು ದೇವರಾಜೇಗೌಡ ಹೇಳಿದ್ದಾರೆ. ಎಷ್ಟು ಟೆಂಪೋಗಳಲ್ಲಿ ಅಷ್ಟು ದೊಡ್ಡ ಮೊತ್ತವನ್ನು ತುಂಬಬೇಕು ಎಂಬುದು ಬಿಜೆಪಿಯವರಿಗೆ ಗೊತ್ತಿರುತ್ತದೆ" ಎಂದು ಹೇಳಿದರು.
ದೇವರಾಜೇಗೌಡಗೆ ಮುಂಗಡವಾಗಿ ಹಣ ಕೊಟ್ಟಿರುವ ಕುರಿತು ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ. ಆರೋಪಿಯೊಬ್ಬ ಪೊಲೀಸ್ ವಶದಲ್ಲಿದ್ದುಕೊಂಡು ವಾಹನದಲ್ಲಿ ಕೂತು ಏನೋ ಹೇಳಿ ಓಡಿ ಹೋದರೆ ಅದನ್ನು ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವೇ?. ನಮ್ಮ ವಿರುದ್ಧ ಆರೋಪಗಳನ್ನು ಮಾಡುವುದರ ಬದಲು, ನ್ಯಾಯಾಲಯದ ಎದುರು ಸಾಕ್ಷಿಗಳನ್ನು ಇರಿಸಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ದೇವರಾಜೇಗೌಡ ತಾನು ಜೈಲಿನಿಂದ ಹೊರಗೆ ಬಂದ ದಿನ ಸರಕಾರ ಪತನವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ಉಡಾಫೆ ಮಾತುಗಳನ್ನು ಆಡುವುದನ್ನು ಮೊದಲು ನಿಲ್ಲಿಸಲಿ. ಒಮ್ಮೆಯೂ ಶಾಸಕನಾಗಿ ಆಯ್ಕೆಯಾಗದೆ ಇರುವ ವ್ಯಕ್ತಿ, ಸರಕಾರ ಬೀಳಿಸುವ ಮಾತುಗಳನ್ನು ಆಡುತ್ತಾನೆ ಎಂದು ಅವರು ವ್ಯಂಗ್ಯವಾಡಿದರು.
ದೇವರಾಜೇಗೌಡ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಇದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 200-300 ಮಂದಿ ಸಂತ್ರಸ್ತೆಯರು ಇರಬಹುದು. ಅವರಿಗೆ ನ್ಯಾಯ ಕೊಡಿಸಬೇಕು. ರಶ್ಯ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಿದವರಿಗೆ ವಿದೇಶದಿಂದ ಪ್ರಜ್ವಲ್‍ನನ್ನು ಕರೆತರಲು ಆಗುವುದಿಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಇವರು ಮಾಡುವಂತಹ ಇಂತಹ ಕೆಲಸಗಳಿಗೆ ನಾವು ಪ್ರಚೋದನೆ ನೀಡಬೇಕಾ? ನಮಗೆ ಬರ ನಿರ್ವಹಣೆ, ಚುನಾವಣೆ ಬಿಟ್ಟು ಬೇರೆ ಯಾವುದೆ ಕೆಲಸಗಳು ಇರಲಿಲ್ಲವೇ?. ಬಿಜೆಪಿ ಹಾಗೂ ಜೆಡಿಎಸ್‍ನವರು ಈ ಪ್ರಕರಣದ ದಿಕ್ಕು ತಪ್ಪಿಸಲು ಕಾಂಗ್ರೆಸ್‍ನವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಮಾಧ್ಯಮದವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಜ್ವಲ್ ರೇವಣ್ಣ ಯಾವ ಕಾರಣಕ್ಕಾಗಿ ಇಂತಹ ಕೆಲಸ ಮಾಡಿದ್ದು?. ತನ್ನ ಮೊಬೈಲ್‍ನಲ್ಲಿ ವಿಡಿಯೋಗಳನ್ನು ಮಾಡಿಟ್ಟುಕೊಂಡಿದ್ದು ಏಕೆ?. ಪ್ರಜ್ವಲ್ ಮೊಬೈಲ್‍ನಿಂದ ವಿಡಿಯೋಗಳು ಆತನ ಕಾರು ಚಾಲಕನಿಗೆ ತಲುಪಿದ್ದು ಹೇಗೆ?. ಅಲ್ಲಿಂದ ಬಿಜೆಪಿ ಅಭ್ಯರ್ಥಿ ಬಳಿ ಬಂದದ್ದು ಹೇಗೆ?. ಆತ ಯಾರು ಯಾವ ಕಾರಣಕ್ಕಾಗಿ ಆ ವಿಡಿಯೋಗಳನ್ನು ವೈರಲ್ ಮಾಡಿದರು ಎಂಬ ಪ್ರಶ್ನೆಗಳಿಗೆ ಬಿಜೆಪಿ ಹಾಗೂ ಜೆಡಿಎಸ್‍ನವರು ಉತ್ತರ ಹೇಳಲಿ ಎಂದು ಅವರು ಆಗ್ರಹಿಸಿದರು.
ದೇವರಾಜೇಗೌಡ ಅಮಿತ್ ಶಾ ಭೇಟಿ ಮಾಡಿ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಕೊಡಲಿಲ್ಲವೇ?. ಹಾಸನದ ಉದ್ಯಾನವನ, ಆಟದ ಮೈದಾನಗಳಲ್ಲಿ ಪೆನ್‍ಡ್ರೈವ್ ಸಿಗೋದಕ್ಕೆ ಅಮಿತ್ ಶಾ ಕಾರಣನಾ?. ಈಗ ಬಿಜೆಪಿಯ ಮಾಜಿ ಶಾಸಕರ ಆಪ್ತರ ಬಂಧನ ಆಗಿದೆ. ಅವರ ಬಳಿಯೂ ಪೆನ್‍ಡ್ರೈವ್‍ಗಳು ಸಿಕ್ಕಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರಜ್ವಲ್‍ಗೆ ಮಾನಸಿಕ ರೋಗ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತಿದ್ದೇವೆ ಅಂತ ಅವರ ಕುಟುಂಬದವರು ಏನಾದರೂ ಹೇಳಿದ್ದಾರಾ?. ಮನೆ ಮಗನಿಗೆ ಏನೂ ಆಗಬಾರದು. ಅವರ ಕುಟುಂಬದ ಗೌರವದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದಾರೆ. ಈ ಕಳಂಕದಿಂದ ಪಾರಾಗಲು ಯಾರಾದರೂ ರಾಜೀನಾಮೆ ನೀಡಿದ್ದಾರಾ? ಎಂದು ಅವರು ಪ್ರಶ್ನಿಸಿದರು.
ಹಾಸನ ಪ್ರಕರಣದಲ್ಲಿ ಯಾಕೆ ಬಿಜೆಪಿ ಸಕ್ರಿಯವಾಗಿಲ್ಲ: ಅಮಿತ್ ಶಾಗೆ ಎಲ್ಲವೂ ಗೊತ್ತಿದೆ ಎನ್ನುತ್ತಾರೆ. ಆದರೆ, ಯಾಕೆ ಅವರು ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಪ್ರಜ್ವಲ್ ರೇವಣ್ಣ ಎಸ್‍ಐಟಿ ವಿಚಾರಣೆಗೆ ಯಾಕೆ ಹಾಜರಾಗುತ್ತಿಲ್ಲ? .ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಸಕ್ರಿಯವಾಗಿದ್ದ ಬಿಜೆಪಿಯವರು, ಹಾಸನ ಪ್ರಕರಣದಲ್ಲಿ ಯಾಕೆ ಸಕ್ರಿಯವಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಗಾರಿದರು.