ನಾಗಾವಿ ಸಂಕೀರ್ಣ ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ : ಪ್ರಿಯಾಂಕ್ ಖರ್ಗೆ ಪರಿಶೀಲನೆ

Update: 2024-09-10 15:55 GMT

ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿರುವ ನಾಗಾವಿ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ರೂಪಿಸಲಾಗಿದ್ದು, ಅದರಂತೆ ಸ್ಮಾರಕಗಳನ್ನು ಉಳಿಸಿಕೊಂಡು ಸುಂದರ ಪ್ರವಾಸಿ ತಾಣವಾಗಿ ರೂಪಿಸಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಕಾರ್ಯಯೋಜನೆ ಪರಿಶೀಲಿಸಿದ ಅವರು, ನಾಗಾವಿಯಲ್ಲಿ 10-13 ಶತಮಾನಗಳ ನಡುವೆ ಘಟಿಕಾಸ್ಥಾನವಿದ್ದು 400ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಠ-ಪ್ರವಚನಗಳಲ್ಲಿ ನಿರತರಾಗಿದ್ದರು, ಅವರಿಗೆ ಉಳಿದುಕೊಳ್ಳಲು ವಸತಿ ನಿಲಯಗಳ ವ್ಯವಸ್ಥೆಯಿದ್ದು, ಅತ್ಯುತ್ತಮ ಗ್ರಂಥಾಲಯವನ್ನೂ ಹೊಂದಿತ್ತು ಎಂಬ ಐತಿಹ್ಯಗಳಿವೆ ಎಂದು ಹೇಳಿದರು.

ಇಂತಹ ಇತಿಹಾಸವನ್ನು ಹೊಂದಿರುವ ಈ ಸ್ಥಳವನ್ನು ಉಳಿಸಿಕೊಂಡು, ಸ್ಮಾರಕಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿರುವುದರಿಂದ ನಾಗಾವಿ ದೇಗುಲಗಳು, ಶಾಸನ ಹಾಗೂ ಸ್ಮಾರಕಗಳನ್ನು ಒಳಗೊಂಡ ಸಂಕೀರ್ಣವನ್ನು ರೂಪಿಸಲಾಗುವುದು. ಪ್ರವಾಸಿಗರಿಗೆ ವಾಹನ ತಂಗುದಾಣ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಯಲ್ಲಮ್ಮ ದೇಗುಲ, ನಂದೀಶ್ವರ ದೇಗುಲ, ರಾಮೇಶ್ವರ ಹಾಗೂ ರಾವಣೇಶ್ವರ ದೇಗುಲಗಳು, ಕಡ್ಲೆ ಬಸವಣ್ಣ, ಹನುಮಾನ್ ಹಾಗೂ ವೀರಪ್ಪಯ್ಯ ದೇಗುಲಗಳು, ಮಧುಸೂಧನಾಲಯ, ಮಲ್ಲಯ್ಯನ ಹಾಗೂ ಈಶ್ವರನ ದೇಗುಲಗಳು, ಎರಡು ಮಸೀದಿಗಳು, ಒಂದು ಜೈನ ಬಸದಿಯನ್ನು ಒಳಗೊಂಡಂತೆ ನಾಗಾವಿ ಸಂಕೀರ್ಣವನ್ನು ರೂಪಿಸಲಾಗುವುದೆಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್, ಪುರಾತತ್ವ ಇಲಾಖೆಯ ನಿರ್ದೇಶಕಿ ಸ್ಮಿತಾ ರೆಡ್ಡಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News