ಬಿಜೆಪಿಯವರು ಗೋಸುಂಬೆಗಿಂತ ಹೆಚ್ಚು ವೇಗವಾಗಿ ಬಣ್ಣ ಬದಲಿಸುವವರು : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿಯವರು ಗೋಸುಂಬೆಗಿಂತ ಹೆಚ್ಚು ವೇಗವಾಗಿ ಬಣ್ಣ ಬದಲಿಸುವವರು. ರೈತರಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದ್ದನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿಗರು ತಮ್ಮ ಆಡಳಿತಾವಧಿಯಲ್ಲೂ ರೈತರಿಗೆ ನೋಟಿಸ್ ನೀಡಿದ್ದರು. ವಕ್ಫ್ ಮಂಡಳಿಗೆ ಬಿಜೆಪಿ ಬೆಂಬಲವಾಗಿ ನಿಂತು ರೈತರ ಭೂಮಿ ಕಸಿಯಲು ಕುಮ್ಮಕ್ಕು ನೀಡಿತ್ತು ಎನ್ನುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತುಗಳೇ ಸಾಕ್ಷಿ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ತಮ್ಮ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು, ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ, 2 ಸಾವಿರ ಕೋಟಿ ರೂ. ಮೊತ್ತದ ವಕ್ಫ್ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು ನಾವೂ ಸುಮ್ಮನೆ ಕೂರಬಾರದು, ನಿಮ್ಮ ಜೊತೆಗೆ ನಾವಿದ್ದೇವೆ’ ಎಂಬುದಾಗಿ ತಾವು ಸಿಎಂ ಆಗಿದ್ದಾಗ ಹೇಳಿಕೆ ನೀಡಿದ್ದ ಬಸವರಾಜ ಬೊಮ್ಮಯಿಯವರು ಈಗ ಬಣ್ಣ ಬದಲಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಕ್ಫ್ ಮಂಡಳಿ ಇಂದು ನೋಟಿಸ್ ನೀಡುವುದಕ್ಕೆ ಹಿಂದಿನ ಸಿಎಂ ಅವರ ನಿರ್ದೇಶನ ಕಾರಣ ಅಲ್ಲವೇ? ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ವಕ್ಫ್ ಭೂಮಿ ವಿಚಾರದಲ್ಲಿ ಬಿಜೆಪಿಗರ ನಿಲುವಿನಲ್ಲಿ ದ್ವಂದ್ವ ಧೋರಣೆ ಏಕೆ?, ಬಿಜೆಪಿಯ ನಿಲುವು ವಕ್ಫ್ ಪರವೋ? ಭೂಮಿ ಹಿಡುವಳಿದಾರರ ಪರವೋ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ವಕ್ಫ್ ನೋಟಿಸ್ ನೀಡಿದ್ದನ್ನು ಮರೆಮಾಚುತ್ತಿರುವುದೇಕೆ? ಬಸವರಾಜ ಬೊಮ್ಮಾಯಿಯವರ ಆದೇಶದಿಂದಲೇ ವಕ್ಫ್ ಭೂಮಿ ವಶಕ್ಕೆ ಮುಂದಾಗಿರುವುದಲ್ಲವೇ?, ಹಿಪಾಕ್ರಸಿ ಮತ್ತು ಡಬಲ್ ಸ್ಟ್ಯಾಂಡರ್ಡ್, ಇವುಗಳು ಬಿಜೆಪಿಯ ಪಕ್ಷದ ಬೈಲಾದಲ್ಲಿ ಅಡಕವಾಗಿದೆಯೇ ಎಂದು ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.