ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ : ಉದ್ಯಮ ಪಾಲುದಾರರ ವಿರುದ್ಧ ಎಫ್‍ಐಆರ್ ದಾಖಲು

Update: 2024-05-24 12:52 GMT

ಸೌಂದರ್ಯ ಜಗದೀಶ್ 

ಬೆಂಗಳೂರು : ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ ಸಂಬಂಧ ಉದ್ಯಮದ ಪಾಲುದಾರರ ವಿರುದ್ಧ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದು ವರದಿಯಾಗಿದೆ.

‘ಉದ್ಯಮದ ಪಾಲುದಾರರು ಮೋಸ ಮಾಡಿದ್ದರಿಂದ ಮಾನಸಿಕವಾಗಿ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಡೆತ್ ನೋಟ್ ಸಿಕ್ಕಿದೆ' ಎಂದು ಮೃತ ಜಗದೀಶ್ ಪತ್ನಿ ಶಶಿರೇಖಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಅವರೇ ಕಾರಣ ಹಾಗೂ ಅವರಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಶಶಿರೇಖಾ ಆರೋಪಿಸಿದ್ದಾರೆ.

ಎ.4ರಂದು ಉದ್ಯಮಿ ಸೌಂದರ್ಯ ಜಗದೀಶ್ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಶಶಿರೇಖಾ ನೀಡಿದ ದೂರಿನ ವಿವರ: ಮೇ 18ರಂದು ಜಗದೀಶ್ ಅವರ ರೂಮಿನಲ್ಲಿದ್ದ ಬಟ್ಟೆಯನ್ನು ಪೂಜೆಗಿಡಲು ತೆಗೆದುಕೊಳ್ಳುವಾಗ ಡೆತ್‍ನೋಟ್ ಲಭ್ಯವಾಯಿತು. ಅದರಲ್ಲಿ, ಸೌಂದರ್ಯ ಕನ್ಸ್ಟ್ರಕ್ಷನ್‍ನ ಸಹ ಪಾಲುದಾರರಾದ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಎಂಬವರು ಜಗದೀಶ್ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು.

ಕಂಪೆನಿ ಲಾಭದಲ್ಲಿದ್ದರೂ ಸಹ ಸುಳ್ಳು ನಷ್ಟ ತೋರಿಸಿ ತಮ್ಮ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‍ನಲ್ಲಿ ಅಡವಿರಿಸಿ ಸಾಲ ಪಡೆದು ಸುಮಾರು 60 ಕೋಟಿ ರೂ.ನಷ್ಟು ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ನಂತರ ಸಬೂಬು ಹೇಳಿ ಖಾಲಿ ಚೆಕ್ ಹಾಗೂ ಖಾಲಿ ಹಾಳೆಗಳ ಮೇಲೆ ಜಗದೀಶ್ ಸಹಿಯನ್ನು ನಕಲಿಸಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ಜಗದೀಶ್ ಅವರಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದೇ ವಿಚಾರವಾಗಿ ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ನಂತರ, ಸುರೇಶ್ ಹಾಗೂ ಹೊಂಬಣ್ಣ ಅವರ ಬಳಿ ಕೇಳಿದಾಗ ಅವರು ಹಣ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಒಂದು ವಾರಗಳ ಹಿಂದೆ ಸುರೇಶ್ ಹಾಗೂ ಹೊಂಬಣ್ಣ ಅವರು ಜಗದೀಶ್ ಅವರಿಗೆ ನಿರಂತರವಾಗಿ ಕರೆ ಮಾಡುತ್ತಿದ್ದರು. ಆ ಕರೆಗಳು ಬಂದಾಗ ಜಗದೀಶ್ ಜರ್ಜರಿತರಾಗುತ್ತಿದ್ದರು ಎಂದು ಶಶಿರೇಖಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News