ಮುಸ್ಲಿಂ ಮೀಸಲಾತಿ ಕುರಿತು ಟೀಕೆ | ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸಿ : ಪ್ರೊ.ರವಿವರ್ಮ ಕುಮಾರ್

Update: 2024-04-25 18:59 IST
ಮುಸ್ಲಿಂ ಮೀಸಲಾತಿ ಕುರಿತು ಟೀಕೆ | ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸಿ : ಪ್ರೊ.ರವಿವರ್ಮ ಕುಮಾರ್

ಪ್ರೊ. ರವಿವರ್ಮ ಕುಮಾರ್

  • whatsapp icon

ಬೆಂಗಳೂರು : ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹನ್ಸರಾಜ್ ಗಂಗಾರಾಮ್ ಅಹೀರ ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರಿಗೆ ಒದಗಿಸಲಾದ ಮೀಸಲಾತಿಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದು, ಬಿಜೆಪಿಗೆ ಮತಗಳನ್ನು ಸೆಳೆಯಲು ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಅಡ್ವೋಕೆಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಒತ್ತಾಯಿಸಿದ್ದಾರೆ.

ಗುರುವಾರ ಇಲ್ಲಿನ ಖಾಸಗಿ ಹೋಟೇಲ್‍ನಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ದೇಶದಲ್ಲಿ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಯೋಗದ ಈಗಿನ ಅಧ್ಯಕ್ಷರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಚುನಾವಣೆಗಳ ಘೋಷಣೆಯೊಂದಿಗೆ, ದೇಶದಲ್ಲಿ ಮಾದರಿ ನೀತಿ ಸಂಹಿತೆಜಾರಿಯಾಗಿದೆ. ಎಂಸಿಸಿ ಅಧ್ಯಾಯ 2ರ ಪ್ರಕಾರ ಅಧಿಕಾರದಲ್ಲಿ ಇರುವ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ, ಪರಿಣಾಮವನ್ನು ಬೀರುವ ಯಾವುದೇ ಕಾರ್ಯದಲ್ಲಿ ಯಾವುದೇ ಪ್ರಾಧಿಕಾರವು ಪಾಲ್ಗೊಳ್ಳಬಾರದು ಎಂದು ತಿಳಿಸಿದೆ. ಹೀಗಾಗಿ ಮುಸ್ಲಿಂ ಮೀಸಲಾತಿ ಕುರಿತಾದ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಹೇಳಿಕೆಯು ಎಂಸಿಸಿಯ ನೇರ ಉಲ್ಲಂಘನೆ ಆಗಿದ್ದು, ಚುನಾವಣಾ ಆಯೋಗವು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದುವರು ಆಗ್ರಹಿಸಿದರು.

ಮುಸ್ಲಿಂ ಮೀಸಲಾತಿ ವಿಚಾರಣೆಯು ಸುಪ್ರೀಂ ಕೋರ್ಟ್‍ನಲ್ಲಿದ್ದರೂ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಪಕ್ಷದವರು ಮತಗಳಿಗೋಸ್ಕರ ಮುಸ್ಲಿಂ ಮೀಸಲಾತಿ ಕುರಿತಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ನ್ಯಾಯಾಂಗದ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕದಲ್ಲಿ ಮುಸ್ಲಿಮರು 1874ರಿಂದ(150ವರ್ಷಗಳಿಂದ) ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಪ್ರತಿ ಹಿಂದುಳಿದ ವರ್ಗಗಳ ಆಯೋಗವು ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಶಿಫಾರಸ್ಸು ಮಾಡಿದೆ. ಹೀಗಾಗಿ ಇದು ಸಮಯ ಪರಿಚಿತ ಮೀಸಲಾತಿ ನೀತಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸು ಅವರು ಹಾವನೂರು ಆಯೋಗದ ವರದಿಯನ್ನು ಅಂಗೀಕರಿಸುವ ಮೂಲಕ ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಒದಗಿಸಿದಾಗ, ಅದನ್ನು ರಾಜ್ಯ ಹೈಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡಬೇಕು ಎಂದು ತೀರ್ಪು ನೀಡಿತು. ಸುಪ್ರಿಂ ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿಯಿತು ಎಂದು ಪ್ರೊ. ರವಿವರ್ಮ ಕುಮಾರ್ ಹೇಳಿದರು.

ಬಸವರಾಜ ಬೊಮಾಯಿ ಸರಕಾರವು ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ತೆಗೆದುಹಾಕಿದಾಗ, ಅದನ್ನು ಸುಪ್ರಿಂ ಕೋರ್ಟ್‍ನಲ್ಲಿ ಪ್ರಶ್ನಿಸಲಾಯಿತು. ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ನಿಲ್ಲಿಸುವುದರ ವಿರುದ್ಧ ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈ ಸಂಧರ್ಭಗಳಲ್ಲಿ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಹೇಳಿಕೆಯು ಸಂಪೂರ್ಣವಾಗಿ ಅನಗತ್ಯ ಟೀಕೆಯಾಗಿದೆ ಎಂದು ಅವರು ತಿಳಿಸಿದರು.

ಸಂವಿಧಾನದ ಆರ್ಟಿಕಲ್ 338(ಬಿ) ಅಡಿಯಲ್ಲಿ ಅಧ್ಯಕ್ಷರು ಯಾವುದೇ ಟೀಕೆಗಳ ಹೇಳಿಕೆಗಳನ್ನು ನೀಡುವ ಅಧಿಕಾರವನ್ನು ಹೊಂದಿಲ್ಲ. ಅಧ್ಯಕ್ಷರು ಪ್ರತ್ಯೇಕ ಮತ್ತು ಸ್ವತಂತ್ಯ ಅಧಿಕಾರವನ್ನು ಹೊಂದಿಲ್ಲ. ಈ ನಿಭಂದನೆಯ ಅಡಿಯಲ್ಲಿ ಅಯೋಗದ ಪ್ರತಿಯೊಂದು ಕಾರ್ಯವನ್ನು ಆಯೋಗವು ಆಯೋಗದಂತೆ ನಿರ್ವಹಿಸುತ್ತದೆಯೇ ಹೊರತು ಅಧ್ಯಕ್ಷರಿಂದ ಅಲ್ಲ. ಆದುದರಿಂದ ಅಧ್ಯಕ್ಷರ ಈ ನಡುವಳಿಕೆಯು ಸಂವಿಧಾನದ ಆರ್ಟಿಕಲ್ 338(ಬಿ) ಉಲ್ಲಂಘನೆ ಆಗಿದೆ ಎಂದು ಅವರು ವಿವರಿಸಿದರು.

ಆರ್ಟಿಕಲ್ 342ಎ(3)ರ ಅಡಿಯಲ್ಲಿ, ಪ್ರತಿ ರಾಜ್ಯವು ತನ್ನ ಸ್ವಂತ ಉದ್ದೇಶಗಳಿಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ದಪಡಿಸಲು ಮತ್ತು ನಿರ್ವಹಿಸಲು ಸಂವಿಧಾನದ ಫೆಡರಲ್ ರಚನೆಯ ಅಡಿಯಲ್ಲಿ ಸಾರ್ವಭೌಮ ಅಧಿಕಾರವನ್ನು ಹೊಂದಿದೆ. ಅದು ಕೇಂದ್ರ ಪಟ್ಟಿಯಿಂದ ಭಿನ್ನವಾಗಿರಬಹುದು. ಆರ್ಟಿಕಲ್ 338ಬಿ(9)ರ ನಿಬಂದನೆಯ ಅಡಿಯಲ್ಲಿ, ರಾಷ್ಟ್ರೀಯ ಆಯೋಗದ ಸಮಾಲೋಚನೆಯು ಅಂತಹ ರಾಜ್ಯ ಪಟ್ಟಿಯ ತಯಾರಿ ಮತ್ತು ಕಾರ್ಯಚರಣೆಗೆ ಯಾವುದೆ ಮಧ್ಯಸ್ಥಿಕೆಯನ್ನು ಹೊಂದಿಲ್ಲ. ಹೀಗಾಗಿ ಅಧ್ಯಕ್ಷರು ಅಧಿಕಾರವಿಲ್ಲದೆ ವರ್ತಿಸಿರುವುದು ಅಸಂವಿಧಾನಿಕವಾಗಿದೆ ಎಂದರು.

ಹನ್ಸರಾಜ್ ಗಂಗಾರಾಮ್ ಅಹೀರ ಅವರು ಮುಸ್ಲಿಮರ ಪರವಾಗಿ ಮೀಸಲಾತಿಯನ್ನು ಧರ್ಮದಾರಿತ ಮೀಸಲಾತಿ ಎಂದು ಪ್ರತಿಪಾದಿಸಿದ್ದಾರೆ. ಈ ಸಮರ್ತನೆಯನ್ನು ಈಗಾಗಲೇ ನ್ಯಾಯಾಂಗವು ತಿರಸ್ಕರಿಸಿದೆ. ಇದರ ಆಧಾರದ ಮೇಲೆ ಬೋಮ್ಮಾಯಿ ಸರಕಾರವು ಮುಸ್ಲಿಮರಿಗೆ ಮಿಸಲಾತಿಯನ್ನು ಹಿಂಪಡೆದಿದೆ. ಈ ಹಿಂಪಡೆಯುವಿಕೆಯ ಕಾರ್ಯಚರಣೆಯನ್ನು ಗೌರವಾನ್ವಿತ ಸುಪ್ರಿಂಕೋರ್ಟ್ ತಡೆ ಹಿಡಿದಿದೆ. ಆದುದರಿಂದ ತನ್ನ ಕಾರ್ಯವ್ಯಾಪ್ತಿಗೆ ಬಾರದ ವಿಷಯದಲ್ಲಿ ಹನ್ಸರಾಜ್ ಗಂಗಾರಾಮ್ ಅಹೀರ ಅವರ ಈ ಹೇಳಿಕೆಯು ಸುಪ್ರಿಂಕೋರ್ಟಿನ ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಸುರೇಶ್ ಲಾತೂರ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News