11 ಮಹಾನಗರ ಪಾಲಿಕೆಗಳಲ್ಲಿ ಅಭಿವೃದ್ಧಿಗೆ ಕ್ರಮ : ಭೈರತಿ ಸುರೇಶ್

ಬೆಂಗಳೂರು : ರಾಜ್ಯದಲ್ಲಿರುವ 11 ಮಹಾನಗರ ಪಾಲಿಕೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಿ.ಟಿ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ, ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಬಳ್ಳಾರಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ-ಧಾರವಾಡ ಹಾಗೂ ರಾಯಚೂರು ಜಿಲ್ಲೆಗಳ ಮಹಾನಗರ ಪಾಲಿಕೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಮೂಲಸೌಲಭ್ಯಗಳನ್ನು ಸಮರ್ಪವಾಗಿ ಕೈಗೊಳ್ಳಲಾಗಿದೆ ಎಂದರು.
ಸ್ವಚ್ಚ ಭಾರತ್ ಮಿಷನ್ 2.0 ಯೋಜನೆಯು 2021ರಿಂದ 2026ನೇ ಸಾಲಿನವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಮಹಾನಗರ ಪಾಲಿಕೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಪಾರಂಪರಿಕ ತಾಜ್ಯ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಐ.ಇ.ಸಿ ಚಟುವಟಿಕೆಗಳು ಮತ್ತು ಸಾಮರ್ಥ್ಯಾಭಿವೃದ್ಧಿ ಅಡಿ ವಿವಿಧ ಹಿತಾಸಕ್ತಿದಾರರಿಗೆ ತರಬೇತಿ, ಕಾರ್ಯಾಗಾರಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ಭೈರತಿ ಸುರೇಶ್ ಹೇಳಿದರು.
ಎಸ್.ಎಫ್.ಸಿ ಯೋಜನೆಯಡಿ ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಹಾಗೂ ಎಸ್.ಎಫ್.ಸಿ ಕುಡಿಯುವ ನೀರು ಯೋಜನೆಗಳಡಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರಕಾರವು ಅನುದಾನವನ್ನು ಹಂಚಿಕೆ ಮಾಡಿ ಬಿಡುಗಡೆಗೊಳಿಸಿದೆ ಎಂದು ಭೈರತಿ ಸುರೇಶ್ ತಿಳಿಸಿದರು.
ಅದೇ ರೀತಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2)ರಡಿ ರಾಜ್ಯದಲ್ಲಿನ 10 ಮಹಾನಗರ ಪಾಲಿಕೆಗಳಾದ ಮೈಸೂರು, ಮಂಗಳೂರು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರ, ಶಿವಮೊಗ್ಗ, ವಿಜಯಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಂದಾಜು ಮೊತ್ತ 2000 ಕೋಟಿ ರೂ.ಗಳಲ್ಲಿ 2024-25ನೇ ಸಾಲಿನಂದ 2026-27ನೇ ಸಾಲಿನ ವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಭೈರತಿ ಸುರೇಶ್ ಹೇಳಿದರು.
ವಿವಿಧ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ, ಮಳೆ ನೀರು ಚರಂಡಿ, ಪಾದಚಾರಿ ಮಾರ್ಗ ಅಭಿವೃದ್ಧಿ, ಕುಡಿಯುವ ನೀರಿನ ಕಾಮಗಾರಿ, ಜಂಕ್ಷನ್ ಅಭಿವೃದ್ಧಿ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಪ್ರಸ್ತುತ 5 ಮಹಾನಗರ ಪಾಲಿಕೆಗಳಾದ ದಾವಣಗೆರೆ, ಶಿವಮೊಗ್ಗ, ಬೆಳಗಾವಿ ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಆದೇಶ ಹೊರಡಿಸಲಾಗಿದೆ ಎಂದು ಭೈರತಿ ಸುರೇಶ್ ತಿಳಿಸಿದರು.
ಬಾಕಿ ಉಳಿದಿರುವ ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಶಿವಮೊಗ್ಗ, ಮೈಸೂರು, ಮಂಗಳೂರು ತುಮಕೂರು ಮತ್ತು ಕಲಬುರಗಿ ಜಿಲ್ಲೆಗಳ ಮಹಾನಗರ ಪಾಲಿಕೆಗಳ ಕ್ರಿಯಾ ಯೋಜನೆಯ ಪ್ರಸ್ತಾವನೆಗಳಿಗೆ ರಾಜ್ಯಮಟ್ಟದ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದ್ದು, ಸರಕಾರದ ಆದೇಶ ಹೊರಡಿಸಲು ಕ್ರಮ ವಹಿಸಲಾಗುವುದು ಎಂದು ಭೈರತಿ ಸುರೇಶ್ ಹೇಳಿದರು.
ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ, 2024-25ನೇ ಸಾಲಿನಲ್ಲಿ 11 ಮಹಾನಗರ ಪಾಲಿಕೆಗೆ ಮತ್ತು 78 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಲ ಮೂಲಗಳ ಪುನಃಶ್ಚೇತನ ಮತ್ತು ಹಸಿರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ತನ್ನ ಪಾಲಿನ ಮೊತ್ತ 248 ಕೋಟಿ ರೂ. ಅನುದಾನದಿಂದ ಮೊದಲನೇಯ ಕಂತಿನ ಅನುದಾನ 49.66 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಭೈರತಿ ಸುರೇಶ್ ತಿಳಿಸಿದರು.
15ನೇ ಹಣಕಾಸು ಆಯೋಗದ 2024-25ನೇ ಸಾಲಿನ ಅನುದಾನವು ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವುದಿಲ್ಲ. ಸ್ವಚ್ಚ ಭಾರತ್ ಮಿಷನ್ 2.0 ಅಡಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಇಲ್ಲಿಯ ವರೆಗೆ ಕೇಂದ್ರ ಸರಕಾರದ ಪಾಲು 219 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಭೈರತಿ ಸುರೇಶ್ ಹೇಳಿದರು.
2024-25ನೇ ಸಾಲಿನಲ್ಲಿ ಸ್ವಚ್ಚ ಭಾರತ್ ಮಿಷನ್ 2.0 ಅಡಿ ಕೇಂದ್ರ ಸರಕಾರದಿಂದ 219 ಕೋಟಿ ರೂ.ಗಳು ಮತ್ತು ರಾಜ್ಯ ಸರಕಾರದಿಂದ 146 ಕೋಟಿ ರೂ.ಗಳು ಸೇರಿ ಒಟ್ಟು 366 ಕೋಟಿ ರೂ.ಗಳನ್ನು ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ನಗರ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದೆ. ಅಮೃತ್ 2.0 ಯೋಜನೆಯಡಿ ದಾವಣಗೆರೆ ಮಹಾನಗರಪಾಲಿಕೆಗೆ ಜಲ ಮೂಲಗಳ ಪುನಃಶ್ಚೇತನಕ್ಕಾಗಿ ಮತ್ತು ಹಸಿರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿಗಾಗಿ 13 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಭೈರತಿ ಸುರೇಶ್ ತಿಳಿಸಿದರು.
ದಾವಣಗೆರೆ ಜಿಲ್ಲೆಗೆ 15ನೇ ಹಣಕಾಸು ಆಯೋಗದ ಅನುದಾನದಡಿ 2024-25 ನೇ ಸಾಲಿನಲ್ಲಿ ಎಸ್.ಎಫ್.ಸಿ ಯೋಜನೆಯಡಿ 2024-25ನೇ ಸಾಲಿನಲ್ಲಿ ಮೂಲಭೂತ ಸೌಕರ್ಯಗಳಿಗಾಗಿ 28.77 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಸ್ವಚ್ಚಭಾರತ್ ಮಿಷನ್2.0 ಅಡಿ 701 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು, ಅನುದಾನ ವೆಚ್ಚವಾಗಿರುವುದಿಲ್ಲ. ಎಸ್.ಎಫ್.ಸಿ ಯೋಜನೆಯ ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯಡಿ 1008 ಲಕ್ಷ ರೂ. ಹಂಚಿಕೆಯಾಗಿದ್ದು, 829 ಲಕ್ಷ ಬಿಡುಗಡೆಯಾಗಿದೆ ಇದರಲ್ಲಿ 407.70 ಲಕ್ಷ ರೂ. ವೆಚ್ಚವಾಗಿದೆ ಎಂದು ಭೈರತಿ ಸುರೇಶ್ ಹೇಳಿದರು.
ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆಯಡಿ 10 ಲಕ್ಷ ಹಂಚಿಕೆಯಾಗಿದ್ದು, 7.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಯಾವುದೇ ವೆಚ್ಚವಾಗಿರುವುದಿಲ್ಲ. 2024ನೇ ಅಕ್ಟೋಬರ್ 18ರ ಆದೇಶದಂತೆ ದಾವಣಗೆರೆ ಮಹಾನಗರ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ-2ರಡಿಯಲ್ಲಿ 127 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಭೈರತಿ ಸುರೇಶ್ ತಿಳಿಸಿದರು.