ಎಸ್‍ಇಪಿ-ಟಿಎಸ್‍ಪಿ ಯೋಜನೆ | ತಳ ಸಮುದಾಯಕ್ಕೆ ಸಿಗುವುದು 7 ಸಾವಿರ ಕೋಟಿ ರೂ.ಗಳಷ್ಟೇ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಈ ಬಾರಿ ಮೀಸಲಿರಿಸಿದ್ದ 42 ಸಾವಿರ ಕೋಟಿ ರೂ.ಗಳ ಪೈಕಿ ನಿಜವಾಗಿಯೂ ತಳ ಸಮುದಾಯಕ್ಕೆ ಸಿಗುವುದು 7 ಸಾವಿರ ಕೋಟಿ ರೂ.ಗಳಷ್ಟೇ. ಪರಿಶಿಷ್ಟ ಜಾತಿ ಹಾಗೂ ಪಂಗಡವರಿಗೆ ಮೀಸಲಿಟ್ಟಿದ್ದ ಹಣವನ್ನು ಸರಕಾರ ಗ್ಯಾರಂಟಿಗಳಿಗೆ ಬಳಕೆ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ಮೇರೆಗೆ ಮಾತನಾಡಿದ ಅವರು, ದಲಿತ ಸಮುದಾಯಗಳ ನಿಗಮಗಳಿಗೆ ಈ ಬಾರಿ 354 ಕೋಟಿ ಇಟ್ಟಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿ ಅನುಷ್ಠಾನ ನಿರ್ವಹಣೆ ಸಮಿತಿ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ರಾಜಕೀಯ ಕಾರ್ಯದರ್ಶಿಗಳಿಗೆ ಸರಕಾರಿ ನಿವಾಸ ನೀಡಲಾಗಿದೆ. ಈ ಮೂಲಕ ಸರಕಾರದ ರೀತಿ-ನೀತಿಗಳು ಯಾರ ಪರವಾಗಿವೆ ಎಂಬುದನ್ನು ಪರೋಕ್ಷವಾಗಿ ಸೂಚಿಸಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಹಿಂದಿನ ಮೂರು ಬಜೆಟ್‍ಗಳಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಇದರಿಂದ ತಳವರ್ಗದವರಿಗೆ ಅನ್ಯಾಯವಾಗಿದೆ. ದಲಿತರ ಹಣವನ್ನು ಸರಕಾರ ಲೂಟಿ ಹೊಡೆದಿದೆ. ಒಟ್ಟಾರೆ ಒಲೈಕೆ ರಾಜಕಾರಣ ಹಾಗೂ ಶಾಶ್ವತ ಯೋಜನೆಗಳಿಲ್ಲದ ಬಜೆಟ್ ಇದಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡನೆ ಜೊತೆಗೆ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೂರನೇ ಶ್ವೇತಪತ್ರ ಮಂಡಿಸಿದೆ. ‘ಸಾಲ ಮಾಡಿ ತುಪ್ಪ ತಿನ್ನು’ ಎಂಬಂತೆ ಸಾಲದ ಬಜೆಟ್ ಇದಾಗಿದ್ದು, ಹಿಂದಿನ ಮೂರು ವರ್ಷಗಳಲ್ಲಿ 3 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದೆ. ಈ ಮೂಲಕ ಪ್ರತಿಯೊಬ್ಬನ ತಲೆ ಮೇಲೆ 1 ಲಕ್ಷ ಸಾಲ ಹೊರೆಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಹಿಂದಿನ ಮೂರು ವರ್ಷಗಳಲ್ಲಿ ನಿರೀಕ್ಷಿತ ಆದಾಯ ಬಂದಿಲ್ಲ. ಅಂದಾಜಿಗಿಂತ ಕಡಿಮೆ ವರಮಾನ ಬಂದಿದೆ. ಬಂಡವಾಳ ವೆಚ್ಚ ಸರಿಯಾಗಿ ತೋರಿಸಿಲ್ಲ. ಆದಾಯಕ್ಕೂ ಖರ್ಚಿಗೂ ಸರಿಯಾದ ಲೆಕ್ಕ ತೋರಿಸಿಲ್ಲ. ಒಲೈಕೆ ರಾಜಕಾರಣಕ್ಕಾಗಿ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗಾಗಿ ಹೆಚ್ಚಿನ ಅನುದಾನ ನೀಡಲಾಗಿದೆ. ನಿಗದಿತ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡಿರುವುದು ಎಷ್ಟು ಸರಿ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.