ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ | ಪುನೀತ್ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ : ನಾಳೆ ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರು: ನಾಯಿ ಮಾಂಸ ರವಾನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಸಂಘಪರಿವಾರದ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಿ ನಗರದ 5ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶನಿವಾರ ಬಂಧಿಸಲಾಗಿತ್ತು. ಬಳಿಕ ಶನಿವಾರ ರಾತ್ರಿ ನಗರದ ಎನ್‍ಜಿವಿಯಲ್ಲಿರುವ ನಾಯಾಧೀಶರ ನಿವಾಸಕ್ಕೆ ಕರೆತಂದು ಅವರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದು, ಜು.29ರ ಸೋಮವಾರ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಪುನೀತ್‍ಕೆರೆಹಳ್ಳಿ ಪರ ವಕೀಲ ಉಮಾಶಂಕರ್, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಕಾಟನ್‍ಪೇಟೆ ಠಾಣಾ ಪೊಲೀಸರು ಪುನೀತ್‍ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ನಾಳೆಜು.29 ಜಾಮೀನು ಅರ್ಜಿ ವಿಚಾರಣೆ ನಡೆಯುವುದಾಗಿ ತಿಳಿಸಿದ್ದಾರೆ.
ಏನಿದು ಪ್ರಕರಣ :ನಗರಕ್ಕೆ ನಾಯಿ ಮಾಂಸ ರವಾನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದ ಬಳಿ ಪುನೀತ್‍ಕೆರೆಹಳ್ಳಿ ಮತ್ತು ಸಹಚರರು ಗುಂಪುಗಲಾಟೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿತ್ತು.