ಹಿಂದೂಗಳು ವಿರೋಧಿಸಿದ್ದು ಬ್ರಿಟಿಷರನ್ನೇ ಹೊರತು, ಆಂಗ್ಲ ಭಾಷೆಯನ್ನಲ್ಲ: ಪುರುಷೋತ್ತಮ ಬಿಳಿಮಲೆ

Update: 2024-08-11 16:54 GMT

ಬೆಂಗಳೂರು : ಭಾರತೀಯ ಹಿಂದೂಗಳು ವಿರೋಧಿಸಿದ್ದು ಬ್ರಿಟಿಷರನ್ನೆ ಹೊರತು, ಆಂಗ್ಲಭಾಷೆಯನಲ್ಲ. ಆದರೆ ದೇಶದ ಮುಸ್ಲಿಮರು ಬ್ರಿಟಿಷರೊಂದಿಗೆ ಆಂಗ್ಲ ಭಾಷೆಯನ್ನು ವಿರೋಧಿಸಿ ತಮ್ಮದೆ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭಿಸಿದ್ದರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ರವಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುವ್ವಿ ಪಬ್ಲಿಕೇಶನ್ಸ್ ಮತ್ತು ರಂಗ ವಿಜಯಾ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ಡಾ.ಟಿ.ಲಕ್ಷ್ಮಿನಾರಾಯಣ ರಚಿಸಿರುವ ವಿರಚಿತ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಸೇರಿದಂತೆ ಐದು ನಾಟಕ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 1857ರಲ್ಲಿ ಬಹದ್ದೂರ್ ಶಾ ಬ್ರಿಟಿಷರಿಂದ ಅಧಿಕಾರ ಕಳೆದುಕೊಂಡ ಬಳಿಕ ಮುಸ್ಲಿಮ್ ಸಮುದಾಯಕ್ಕೆ ಇತರಗಿಂತ ಹೆಚ್ಚಾಗಿ ಬ್ರಿಟಿಷರ ಮೇಲೆ ಕೋಪವಿತ್ತು ಎಂದು ತಿಳಿಸಿದರು.

ಮುಂದಿನ 100 ವರ್ಷಗಳ ವರೆಗೆ, ಭಾರತೀಯ ಮುಸ್ಲಿಮ್ ಸಮುದಾಯವರು ಬ್ರಿಟಿಷರೊಂದಿಗೆ ಅವರ ಆಂಗ್ಲ ಭಾಷೆಯನ್ನು ವಿರೋಧಿಸಿ ಹೋರಾಟ ಮಾಡಿರುವ ಫಲವಾಗಿ ಭಾರತದಲ್ಲಿ ಉರ್ದು ವಿಶ್ವವಿದ್ಯಾನಿಲಯ, ಜಾಮಿಯಾ ಶಿಕ್ಷಣ ವ್ಯವಸ್ಥೆ ಪ್ರಾರಂಭಗೊಂಡಿದ್ದು. ಭಾರತೀಯ ಹಿಂದೂಗಳು ಬ್ರಿಟಿಷರನ್ನು ವಿರೋಧಿಸಿದ್ದರು. ಗಾಂಧಿ, ನೆಹರೂ, ರಾಮಕೃಷ ಪರಮಹಂಸ, ದಯಾನಂದ ಸರಸ್ವತಿ, ಸ್ವಾಮಿ ವಿವೇಕನಂದ, ರಾಜಾರಾಮ್ ಮೋಹನ್‍ರಾಯ್ ಅವರು ವಿದೇಶಗಳಿಗೆ ತೆರಳಿ ಆಂಗ್ಲ ಶಿಕ್ಷಣ ಪಡೆದಿದ್ದರು ಎಂದು ಪುರುಷೋತ್ತಮ್ ಬಿಳಿಮಲೆ ಮಾಹಿತಿ ನೀಡಿದರು.

ಬ್ರಿಟಿಷರು ದೇಶಬಿಟ್ಟು ಹೋಗುವಾಗ ಆಡಳಿತದ ಒಳಗೆ ಆಂಗ್ಲ ಕಲಿತ ಹಿಂದೂಗಳಿಗೆ ಅವಕಾಶ ಸಿಕಿತ್ತು. ಆದರೆ ಭಾರತೀಯ ಮುಸ್ಲಿಮ್ ಸಮುದಾಯದವರಿಗೆ ಸಿಕ್ಕಿರಲಿಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ಆಂಗ್ಲ ಕಲಿತ ಮುಸ್ಲಿಮ್ ಸಮುದಾಯ ಪಾಕಿಸ್ತಾನಕ್ಕೆ ತೆರಳಿದ್ದರು. ಮುಸ್ಲಿಮರು 600ವರ್ಷಗಳಷ್ಟು ಭಾರತದಲ್ಲಿ ಆಳ್ವಿಕೆ ನಡೆಸಿದ್ದಾರೆ ಎನ್ನುವುದು ನಿಜವಾದರೆ, 1957ರ ಅನಂತರ ಏಕಾಏಕಿಯಾಗಿ ಅವರು ಬಡವರು ಹೇಗಾದರೂ? ಜಮೀನು, ಹಣ ಹೇಗೆ ಕಳೆದುಕೊಂಡರು? ಚರಿತ್ರೆ ಬಹಳ ಸಂಕಿರಣವಾದದ್ದು, ಅದನ್ನು ನಾವು ಮರೆಯಬಾರದು ಎಂದು ಅವರು ಎಚ್ಚೆರಿಕೆ ನೀಡಿದರು.

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, 20ರಿಂದ 30ವರ್ಷದೊಳಗಿನ ಯುವಕರು ಸಂವಿಧಾನ 8ನೇ ಪರಿಚ್ಛೇದ ಅಂಗಿಕರಿಸಿದ 22ಭಾಷೆಯಲ್ಲಿ ಮುಖ್ಯವಾಹಿನಿಗೆ ಬಾರದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪುಸ್ತಕ ಬರೆಯುವ ಯೋಜನೆಗೆ ಅರ್ಜಿ ಆಹ್ವಾನಿಸಿದ್ದರು. ಕರ್ನಾಟಕದಿಂದ 258ಅರ್ಜಿಗಳು ಬಂದಿದ್ದು, ಅದರಲ್ಲಿ ಇಬ್ಬರು ಮಾತ್ರ ಅರ್ಹತೆ ಪಡೆಕೊಂಡಿದ್ದರು. ಇದನ್ನು ಗಮನಿಸಿದಾಗ ನಮ್ಮ ಯುವಕರಿಗೆ ಸ್ವಾತಂತ್ರ್ಯ ಹೋರಾಟದ ಕುರಿತು ತಿಳುವಳಿಕೆ ಎಷ್ಟಿದೆ ಎನ್ನುವ ಪರಮರ್ಶಿಸುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ ಎಂದು ಪುರುಷೋತ್ತಮ್ ಬಿಳಿಮಲೆ ನುಡಿದರು.

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯ ಡೀನ್ ಪ್ರೊ.ಎಂ.ಎನ್.ವೆಂಕಟೇಶ್, ಚಿತ್ರ ನಿರ್ದೇಶಕ ಪೃಥ್ವಿ ಕೊಣನೂರು, ಹೋರಾಟಗಾರ್ತಿ ಡಾ.ಲೀಲಾ ಸಂಪಿಗೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News