ಸಮಾಜಘಾತುಕ ಶಕ್ತಿಗಳನ್ನು ಕೊಡಲೇ ಬಂಧಿಸಿ : ಪ್ರತಿಪಕ್ಷ ನಾಯಕ ಆರ್.ಅಶೋಕ್

Update: 2024-09-12 11:38 GMT

ಬೆಂಗಳೂರು : ‘ಮತಾಂಧ ಪುಂಡರ ಬಾಲ ಕತ್ತರಿಸದೆ ಹೀಗೆ ಬಿಟ್ಟರೆ ಇಂತಹವರು ನಾಳೆ ಉಗ್ರವಾದಿಗಳಾಗುವುದರಲ್ಲಿ ಸಂಶಯವೇ ಇಲ್ಲ. ಗಲಭೆಗೆ ಕಾರಣರಾದ ಸಮಾಜಘಾತುಕ ಶಕ್ತಿಗಳನ್ನ ಈ ಕೊಡಲೇ ಬಂಧಿಸಿ ಕಾನೂನು ವಶಕ್ಕೆ ಒಪ್ಪಿಸಿ ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಜಿಹಾದಿ ಮಾನಸಿಕತೆಗೆ ಜಾಗವಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಗುರುವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಕಾಂಗ್ರೆಸ್ ಸರಕಾರದಲ್ಲಿ ಮತಾಂಧ ಶಕ್ತಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಜಿಹಾದಿ ಮುಳ್ಳುಗಳ ದುಸ್ಸಾಹಸ ಶಾಂತಿ ಕದಡುತ್ತಿದೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಣ್ಮರೆಯಾಗಿರುವ ಕಾನೂನು ಸುವ್ಯವಸ್ಥೆಗೆ ಮತ್ತೂಂದು ನಿದರ್ಶನವಾಗಿದೆʼ ಎಂದು ಟೀಕಿಸಿದ್ದಾರೆ.

‘ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತಹುದೇ ಘಟನೆ ನಡೆದಿದ್ದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಅಷ್ಟೇ ಅಲ್ಲದೆ, ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದವರ ಮೇಲೆಯೇ ಈ ಮತಾಂಧ ಪುಂಡರು ಹಲ್ಲೆ, ದಬ್ಬಾಳಿಕೆ ನಡೆಸುತ್ತಾರೆ ಅಂದರೆ ಈ ದುಷ್ಟರ ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪ್ರೊತ್ಸಾಹ, ಪೋಷಣೆ ದೊರಕುತ್ತಿದೆ ಎಂದು ಊಹಿಸಿಕೊಳ್ಳಿ. ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರದ ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ ರಾಜಕಾರಣ, ತುಷ್ಟೀಕರಣವೇ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಎನ್‍ಐಎ ತನಿಖೆಗೆ ಒತ್ತಾಯ: ‘ನಾಗಮಂಗಲದ ಘಟನೆ ಕುರಿತು ಎನ್‍ಐಎ ಮೂಲಕ ತನಿಖೆ ಮಾಡಿಸಿದರೆ ಮಾತ್ರ ಸತ್ಯಾಂಶ ಹೊರ ಬರಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಒಂದು ಸಮುದಾಯಕ್ಕೆ ಅಪಮಾನ ಮಾಡುವಂತಹದ್ದು ನಡೆಯುತ್ತಿದೆ. ತನ್ನ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಇಂತಹ ಕೆಲಸ ಮಾಡುತ್ತಿದೆಯೇ? ಎಂಬ ಸಂಶಯ. ಇಷ್ಟೊಂದು ಕೆಟ್ಟ ಸರಕಾರ ಎಂದು ಜನರು ಮಾತನಾಡುವ ವೇಳೆ ಅದನ್ನು ಮುಚ್ಚಿ ಹಾಕಲು ನೀವೇನಾದರೂ ಗಲಭೆ ಮಾಡುತ್ತಿದ್ದೀರಾ?’

-ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News