ಸಂಪುಟ ಸಭೆ ಮಾಡಿದ ಮಾತ್ರಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗಿಬಿಡುತ್ತಾ? : ಆರ್.ಅಶೋಕ್

Update: 2024-09-17 12:34 GMT

ಬೆಂಗಳೂರು : ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ ಮಾಡಿ ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ಸರಕಾರ ಜನತೆಯ ಕಣ್ಣಿಗೆ ಮಣ್ಣೆರಚಿ ದ್ರೋಹ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರೇ, ಸಂಪುಟ ಸಭೆ ಮಾಡಿದ ಮಾತ್ರಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗಿಬಿಡುತ್ತಾ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಮಂಗಳವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿವರ್ಷ 5ಸಾವಿರ ಕೋಟಿ ರೂ.ನೀಡುವುದಾಗಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರಲ್ಲ, ಎರಡು ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಒಟ್ಟು ಎಷ್ಟು ಹಣ ಮೀಸಲಿಟ್ಟಿದ್ದೀರಿ? ಅದರಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಖರ್ಚಾಗಿದ್ದು ಎಷ್ಟು?’ ಎಂದು ಕೇಳಿದ್ದಾರೆ.

‘ಬಳ್ಳಾರಿಯಲ್ಲಿ 5ಸಾವಿರ ಕೋಟಿ ರೂ.ಮೊತ್ತದ ಅಪೇರಲ್ ಪಾರ್ಕ್ ಸ್ಥಾಪಿಸುವ ಭರವಸೆ ಏನಾಯ್ತು? ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಬಳ್ಳಾರಿಯನ್ನ ಜೀನ್ಸ್ ರಾಜಧಾನಿ ಮಾಡುವ ಭರವಸೆ ಏನಾಯ್ತು?. ಕ.ಕ. ಭಾಗದಲ್ಲಿ 41 ಕ್ಷೇತ್ರಗಳಲ್ಲಿ ಕನಿಷ್ಠ 100ಪಿಯುಸಿ ಕಾಲೇಜು, ಒಂದು ಮಹಿಳಾ ಪದವಿ ಕಾಲೇಜು ಸ್ಥಾಪಿಸುವ ಭರವಸೆ ನೀಡಿದ್ದರಲ್ಲಾ? ಅದರಲ್ಲಿ ಒಂದಾದರೂ ಸ್ಥಾಪನೆಯಾಗಿದೆಯಾ?’ ಎಂದು ಅವರು ಕೇಳಿದ್ದಾರೆ.

‘ಕಲ್ಯಾಣ ಕರ್ನಾಟಕದ ಪ್ರತಿ ಹೋಬಳಿಯಲ್ಲಿ ಒಂದು ಅಂಬೇಡ್ಕರ್ ಇಂಗ್ಲಿಷ್‌ ಮಾಧ್ಯಮ ಶಾಲೆ ಸ್ಥಾಪಿಸುವ ಭರವಸೆ ನೀಡಿದ್ದರಲ್ಲ, ಕನಿಷ್ಠ ಪಕ್ಷ ಒಂದಾದರೂ ಸ್ಥಾಪನೆ ಆಗಿದೆಯಾ?. ಎರಡು ವರ್ಷದೊಳಗೆ ಆ ಭಾಗದಲ್ಲಿ 2,500ಹೊಸ ಶಾಲಾ ಕೊಠಡಿ ನಿರ್ಮಾಣ ಹಾಗು ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳ ನೇಮಕಾತಿ ಮಾಡುತ್ತೇವೆ ಎನ್ನುವ ಭರವಸೆ ಈಡೇರುವುದು ಯಾವಾಗ? ಕಳೆದ 15 ತಿಂಗಳಲ್ಲಿ ಎಷ್ಟು ಶಿಕ್ಷಕರ ನೇಮಕಾತಿ ಆಗಿದೆ? ಎಷ್ಟು ಶಾಲಾ ಕೊಠಡಿಗಳ ನಿರ್ಮಾಣ ಆಗಿದೆ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಲ್ಯಾಣ ಕರ್ನಾಟಕದ ಗ್ರಾ.ಪಂ.ಗಳಿಗೆ ತಲಾ 1 ಕೋಟಿ ರೂ.ಅನುದಾನ ನೀಡುವ ಭರವಸೆ ಈಡೇರಿದೆಯೇ?. ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಸರಕಾರ ಕಲ್ಯಾಣ ಕರ್ನಾಟಕವನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕಾಂಗ್ರೆಸ್ ಸರಕಾರಕ್ಕೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ನಾಮಕಾವಸ್ತೆ ಸಂಪುಟ ಸಭೆ ಮಾಡುವ ಮೊದಲು ಕಲ್ಯಾಣ ಕರ್ನಾಟಕದ ಜನತೆಯ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹಾಗೇ ಉಳಿದಿದೆಯೇ ಅಥವಾ ತೆಲಂಗಾಣ ಚುನಾವಣಾ ಪ್ರಚಾರಕ್ಕೆ ‘ಗುಳೇ’ ಹೋಯಿತೋ? ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಕೇವಲ ಪೊಳ್ಳು ಭರವಸೆಗಳಾಗಿ ಉಳಿದಿದೆಯೂ ಅಥವಾ ಕಿಂಚಿತ್ತಾದರೂ ಅನುಷ್ಠಾನ ಆಗಿದೆಯೂ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರೇ ಫ್ಯಾಕ್ಟ್‌ ಚೆಕ್ ಮಾಡಿಸಿ ಕಲ್ಯಾಣ ಕರ್ನಾಟಕದ ಜನತೆಗೆ ವಾಸ್ತವಾಂಶ ತಿಳಿಸಬೇಕು’ ಎಂದು ಅಶೋಕ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News