ರಾಹುಲ್ ಗಾಂಧಿಗೆ ಯುವಕರ ಮೇಲೆ ಅಪಾರವಾದ ನಂಬಿಕೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-03-27 16:33 GMT

ಬೆಂಗಳೂರು: ರಾಹುಲ್ ಗಾಂಧಿ ಅವರಿಗೆ ಯುವಕರ ಮೇಲೆ ಅಪಾರವಾದ ನಂಬಿಕೆ ಇದೆ. ಆ ಕಾರಣಕ್ಕೆ ಯುವ ನ್ಯಾಯದ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಯ ಭಾರತ್ ಜೋಡೋ ಸಭಾಂಗಣದಲ್ಲಿ ಯುವ ನ್ಯಾಯ ಗ್ಯಾರಂಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ನ್ಯಾಯದ ಮೂಲಕ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಪ್ರತ್ಯೇಕ ಕಾನೂನು ಜಾರಿ, ಗಿಗ್ ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆ, ಯುವ ಬೆಳಕು ಕಾರ್ಯಕ್ರಮದ ಮೂಲಕ ಯುವ ಉದ್ಯಮಿಗಳಿಗೆ ಉತ್ತೇಜನ ನೀಡಲು ಪ್ರತಿ ಜಿಲ್ಲೆಗೆ 5 ಸಾವಿರ ಕೋಟಿ ಅನುದಾನ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ದೊಡ್ಡ ಇತಿಹಾಸವುಳ್ಳ ಪಕ್ಷ. ದೇಶದಲ್ಲಿ 21 ವರ್ಷದವರಿಗೆ ಮತದಾನದ ಹಕ್ಕನ್ನು ನೀಡುತ್ತಿದ್ದರು. ರಾಜೀವ್ ಗಾಂಧಿ ಅವರು ದೇಶದ ಯುವಕರ ಮೇಲೆ ನಂಬಿಕೆ ಇಟ್ಟು ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದರು. ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ ಬಿಜೆಪಿ ನಾಯಕರೆಲ್ಲರೂ ಈ ನಿರ್ಧಾರವನ್ನು ಟೀಕೆ ಮಾಡುತ್ತಿದ್ದರು. ಆಡುವ ಮಕ್ಕಳಿಗೆ ಮತದಾನದ ಹಕ್ಕು ನೀಡಲಾಗುತ್ತಿದೆ ಎಂದು ಟೀಕಿಸಿದರು. ಆದರೆ, ರಾಜೀವ್ ಗಾಂಧಿ ಅವರು ದೇಶದ ಯುವಕರ ಮೇಲೆ ಅಚಲವಾದ ನಂಬಿಕೆಯನ್ನು ಇಟ್ಟಿದ್ದರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

‘ಭಾರತ ಪುರಾತನ ದೇಶವಾದರೂ ಯುವಕರ ದೇಶ. ನಾನು ಯುವಕ, ನನಗೂ ಕನಸುಗಳಿವೆ. ದೇಶದ ಯುವಕರ ಮೇಲೆ ನನಗೆ ನಂಬಿಕೆ ಇದೆ' ಎಂದು ರಾಜೀವ್ ಗಾಂಧಿ ಹೇಳಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಅವರು ವಿರೋಧ ಪಕ್ಷದ ಸ್ಥಾನದಲ್ಲಿದ್ದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ಒಂದು ಮಾತು ಹೇಳಿದರು. ‘ನಾವು ಹತ್ತನೇ ತರಗತಿ ಪಾಸ್ ಮಾಡಿದ 16 ವರ್ಷದ ಯುವಕರ ಕೈಗೆ ಬಂದೂಕು ನೀಡಿ ದೇಶ ಕಾಯಲು ಕಳುಹಿಸುತ್ತಿದ್ದೇವೆ. ಅಂತಹದರಲ್ಲಿ 18 ವರ್ಷದವರಿಗೆ ಮತದಾನದ ಹಕ್ಕು ನೀಡುವುದರಲ್ಲಿ ತಪ್ಪಿಲ್ಲ' ಎಂದು ಸಮರ್ಥಿಸಿಕೊಂಡರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಯುವಕರಿಗೆ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಬೇರೆ ಯಾವುದೇ ಪಕ್ಷದಲ್ಲಿ ಇಂತಹ ತೀರ್ಮಾನ ಮಾಡಿಲ್ಲ. ವಿಧಾನಸಭೆಯಲ್ಲೂ 53 ಮಂದಿ ಯುವಕರಿಗೆ ಪಕ್ಷ ಟಿಕೆಟ್ ನೀಡಿತ್ತು ಎಂದು ಡಿ.ಕೆ.ಶಿವಕುಮಾರ್ ಮೆಲುಕು ಹಾಕಿದರು.

ಯುವಕರು ಹಾಗೂ ಮಹಿಳೆಯರು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ವಿಶ್ವಾಸ ನನಗಿತ್ತು. ಅದೇ ಕಾರಣಕ್ಕೆ ಮಹಿಳೆಯರಿಗಾಗಿ ಶಕ್ತಿ, ಗೃಹಲಕ್ಷ್ಮೀ ಯೋಜನೆ ಯುವಕರಿಗಾಗಿ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದು, ನಂತರ ಯುವಕರಿಗೆ ಪಕೋಡಾ ಮಾರಿ ಎಂದು ಹೇಳಿ ಅವಮಾನ ಮಾಡಿತ್ತು ಎಂದು ಡಿ.ಕೆ.ಶಿವಕುಮಾರ್ ದೂರಿದರು.

ನೀವು ನಾಯಕರಾಗಬೇಕಾದರೆ ನೀವು ಪ್ರತಿ ಬೂತ್‍ನಲ್ಲಿ ಐದು ಯುವಕರಿಗೆ ಜವಾಬ್ದಾರಿ ನೀಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡಬೇಕು. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ತಂದುಕೊಡಬೇಕು. ನೀವು ನನಗೆ ಹಾಗೂ ಬೇರೆಯವರಿಗೆ ಜಿಂದಾಬಾದ್ ಹಾಕುವುದು ಬೇಡ. ವ್ಯಕ್ತಿಪೂಜೆ ಬಿಟ್ಟು ಪಕ್ಷಪೂಜೆ ಮಾಡಿ ಎಂದು ಡಿ.ಕೆ.ಶಿವಕುಮಾರ್ ಯುವಕರಿಗೆ ಸೂಚಿಸಿದರು.

ನಮ್ಮ ಸರಕಾರದಲ್ಲಿ ಎನ್‍ಎಸ್‍ಯುಐ ಅಧ್ಯಕ್ಷರಿಗೆ ಸಚಿವ ಸಂಪುಟ ಸಭೆಯ ಸ್ಥಾನಮಾನ ನೀಡಲಾಗಿದೆ. ಆ ಮೂಲಕ ನಾವು ಯುವಕರಿಗೆ ಆದ್ಯತೆ ನೀಡಿದ್ದೇವೆ. ತಾಲೂಕು, ಜಿಲ್ಲಾ ಮಟ್ಟದ ಪಕ್ಷದ ಸಮಿತಿಯಲ್ಲಿ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳನ್ನು ಹೊಂದಿರಬೇಕು. ಇನ್ನು ಪಕ್ಷದ ಕಾರ್ಯಕರ್ತರಿಗೆ ವಿವಿಧ ಸಮಿತಿಗಳಲ್ಲಿ ಅಧಿಕಾರ ಹಂಚಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಚಿಕ್ಕವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರು ಎಂದಿಗೂ ಪಕ್ಷ ಬಿಡುವುದಿಲ್ಲ. ಹೀಗಾಗಿ ಯುವ ಕಾಂಗ್ರೆಸ್ ಸದಸ್ಯತ್ವವನ್ನು ಹೆಚ್ಚಿಸಲು ಸಲಹೆ ನೀಡುತ್ತೇನೆ. ಯುವ ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡುವುದಿಲ್ಲ. ಗುಂಪುಗಾರಿಕೆ ಮಾಡಿದರೆ ನಿಮ್ಮ ಅಧಿಕಾರದಿಂದ ಇಳಿಸಿ ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಬಂಟಿ ಶೆಲ್ಕೆ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಗೌತಮ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಸೇರಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News