ಬೆಂಗಳೂರು ನಗರದ ಹಲವೆಡೆ ಮಳೆ
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ತೀವ್ರ ಹೆಚ್ಚಳವಾಗಿದ್ದು, ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದೆ. ರವಿವಾರದಂದು ಬೆಂಗಳೂರು ನಗರದ ಹಲವೆಡೆ ಜಡಿ ಮಳೆಯಾಗಿದೆ.
ನಗರದ ಕಾರ್ಪೊರೇಷನ್ ಸರ್ಕಲ್, ಲಾಲ್‍ಬಾಗ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ನಾಗರಬಾವಿ, ವಿಜಯನಗರ, ಯಲಹಂಕ, ಕಾಡುಗೋಡಿ ಸೇರಿ ನಗರದಾದ್ಯಂತ ದಿನಪೂರ್ತಿ ಜಡಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ವಾರಾಂತ್ಯದ ರಜಾ ದಿನವಾದ ರವಿವಾರ ನಗರದ ನಿವಾಸಿಗಳಿಗೆ ನಿರಾಸೆ ಉಂಟಾಯಿತು. ಶಾಪಿಂಗ್‍ಗೆ ಎಂ.ಜಿ. ರೋಡ್, ಬ್ರೀಗೆಡ್ ರೋಡ್ ಚರ್ಚ್ ಸ್ಟ್ರೀಟ್, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ ಸೇರಿ ಪ್ರಮುಖ ಮಾರುಕಟ್ಟೆಗಳಿಗೆ ಬಂದಿದ್ದ ಜನರು ಮಳೆಗೆ ಸಿಲುಕಿ ಹೈರಾಣಾದರು.
ಚಂಡಮಾರುತದ ಪರಿಣಾಮ ಶನಿವಾರ ರಾತ್ರಿಯಿಂದಲೇ ಹನಿ ಬೀಳುತ್ತಿದ್ದು, ನಗರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದು ಕಡೆ ಮಳೆ ವಾತವರಣ ಇದ್ದರೆ, ಮತ್ತೊಂದೆಡೆ ಚಳಿ ವಾತವರಣ ಬೆಂಗಳೂರಿನ ಜನತೆ ನಡುಗುವಂತೆ ಮಾಡಿದೆ. ಮೋಡ ಕವಿದ ವಾತಾವರಣ, ತೇವಾಂಶಯುಕ್ತ ಗಾಳಿಯಿಂದಾಗಿ ದಿನವಿಡೀ ಚಳಿಯ ಅನುಭವವಾಗುತ್ತಿದೆ.
ಬೆಂಗಳೂರು ಮಾತ್ರವಲ್ಲದೇ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೂ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಅನೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.