ರಾಜ್ಯಪಾಲರು ಕೇಂದ್ರದಲ್ಲಿಯೇ ಮಂತ್ರಿ ಆಗಬಹುದಿತ್ತು : ರಾಮಲಿಂಗಾರೆಡ್ಡಿ

Update: 2024-08-24 16:52 GMT

ಬೆಂಗಳೂರು : ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದ್ದು, ಇಲ್ಲಿನ ರಾಜ್ಯಪಾಲರನ್ನು ಕೇಂದ್ರ ಸಂಪುಟದಲ್ಲಿ ಕೂರಿಸಿಕೊಳ್ಳಬಹುದಿತ್ತು. ಏಕೆ ರಾಜ್ಯಪಾಲರನ್ನು ಮಾಡಿದರೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಿಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದೇ ರೀತಿಯ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ. ರಾಜ್ಯಪಾಲರ ಸ್ಥಾನಕ್ಕೆ ಮತ್ತು ಗೌರವಕ್ಕೆ ಸ್ಥಾನಕ್ಕೆ ಚ್ಯುತಿ ಆಗುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯಪಾಲರು ಒಳ್ಳೆಯವರಾದರೂ ಅವರಿಂದ ಈ ರೀತಿಯ ಕೆಲಸ ಮಾಡಿಸಲಾಗುತ್ತಿದೆ. ಅವರಿಗೆ ಎಷ್ಟೇ ಒತ್ತಡ ಇದ್ದರು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಕರ್ನಾಟಕದ ರಾಜ್ಯಪಾಲರು ಈ ಹಿಂದೆ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಅವರು ಯಾವ ಸಮುದಾಯಕ್ಕೆ ಸೇರಿದವರು ಗೊತ್ತಿರಲಿಲ್ಲ. ಆದರೆ, ಬಿಜೆಪಿ ವಿವಾದಕ್ಕೆ ಜಾತಿ ಬಣ್ಣ ಬಳಿ ತೊಡಗಿದೆ. ಅದು ಅಲ್ಲದೆ, ಅವರನ್ನು ಕೇಂದ್ರ ಸಂಪುಟದಲ್ಲಿ ಕೂರಿಸಿಕೊಳ್ಳಬಹುದಿತ್ತು ಎಂದರು.

ಬಿಜೆಪಿ ನಾಯಕರ ಹಗರಣಗಳ ಬಗ್ಗೆ ತನಿಖೆ ಆಗಲೇಬೇಕು. ಈಗಾಗಲೇ ಎಲ್ಲ ಪ್ರಕರಣಗಳಲ್ಲಿ ತನಿಖೆಗಳು ನಡೆಯುತ್ತಿವೆ. ಕೆಲವು ಪ್ರಕರಣಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗಳಿಂದ ಅವರುಗಳು ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ತಡೆಯಾಜ್ಞೆ ತೆರವಾದರೆ ಇನ್ನಷ್ಟು ಪ್ರಕರಣಗಳು ಹೊರಗೆ ಬರುತ್ತವೆ ಎಂದು ಹೇಳಿದರು.

ರಾಷ್ಟ್ರಪತಿ ಭೇಟಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯಪಾಲರ ನಡೆಯ ಬಗ್ಗೆ ರಾಷ್ಟ್ರಪತಿ ಗಮನ ಸೆಳೆಯಬೇಕು ಎಂದು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಯಿತು. ನಮ್ಮ ಒಂದಷ್ಟು ಶಾಸಕರು ಈ ಬಗ್ಗೆ ಅಭಿಪ್ರಾಯ ತಿಳಿಸಿದರು. ಇದನ್ನು ನಾವು ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News