ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತ 7 ದಿನ ಎನ್‍ಐಎ ವಶಕ್ಕೆ
ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಮುಝಮ್ಮಿಲ್ ಶರೀಫ್ ಎಂಬ ಶಂಕಿತ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಆರೋಪಿ ಮುಝಮ್ಮಿಲ್ ಶರೀಫ್‍ನನ್ನು ನಗರದ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಅನುಮತಿ ಕೋರಿದ್ದರು.
ಈತ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗೆ ಬಾಂಬ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಾಗಿಸಿರುವ ಜತೆಗೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಅನುಮತಿ ನೀಡುವಂತೆ ಮಾಡಿಕೊಂಡ ಮನವಿ ಪುರಸ್ಕರಿಸಿದ ನ್ಯಾಯಾಲಯ, ಶಂಕಿತನನ್ನು ಏಳು ದಿನಗಳ ಕಾಲ ಎನ್‍ಐಎ ಕಸ್ಟಡಿಗೆ ಒಪ್ಪಿಸಿರುವುದಾಗಿ ಎಂದು ಗೊತ್ತಾಗಿದೆ.
ಬಾಂಬ್ ಸ್ಫೋಟದ ಆರೋಪಿಗೆ ಬೇಕಾದ ಕಚ್ಚಾವಸ್ತು ಪೂರೈಕೆ ಸೇರಿದಂತೆ ಬೇಕಾದ ಮೂಲಸೌಕರ್ಯ ಒದಗಿಸಿದ ಆರೋಪದ ಮೇರೆಗೆ ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಮುಝಮ್ಮಿಲ್ ಶರೀಫ್‍ನನ್ನು ಮಾ.28ರ ಗುರುವಾರ ಬಂಧಿಸಲಾಗಿತ್ತು. ಆರು ತಿಂಗಳ ಹಿಂದೆ ಬೆಂಗಳೂರು ತೊರೆದು ಮೂಡಿಗೆರೆಯ ಚಿಕನ್ ಕೌಂಟಿಯಲ್ಲಿ ಈತ ಕೆಲಸ ಮಾಡುತ್ತಿದ್ದನು. ಪ್ರಕರಣದ ಪ್ರಮುಖ ಶಂಕಿತ ಆರೋಪಿಗಳಾಗಿರುವ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಹಾಗು ಮುಝಮ್ಮಿಲ್ ಎಸೆಸ್ಸೆಲ್ಸಿವರೆಗೂ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿದ್ದರು ಎಂದು ಎನ್‍ಐಎ ಮೂಲಗಳು ತಿಳಿಸಿವೆ.