‘ಕೆಪಿಎಸ್‍ಸಿ ಪರೀಕ್ಷೆ’ | ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತು : ಆರ್.ಅಶೋಕ್
ಬೆಂಗಳೂರು: ಕೆಪಿಎಸ್‍ಸಿ ಗೆಜೆಟೆಡ್ ಪ್ರೊ ಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ಘೋರ ಲೋಪಗಳನ್ನು ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಸರಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗು ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಮರುಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಸೂಕ್ತ ಪರೀಕ್ಷಾ ದಿನಾಂಕ ನಿಗದಿ ಮಾಡಬೇಕು ಎಂದು ಹೇಳಿದ್ದಾರೆ.
ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಮಾಡುವುದು, ಪ್ರಶ್ನೆ ಪತ್ರಿಕೆ ರಚನೆ, ಕನ್ನಡಕ್ಕೆ ತರ್ಜುಮೆ ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಹಿಂದೆ ಆದ ತಪ್ಪುಗಳು, ಲೋಪದೋಷಗಳು ಮರುಕಳಿಸದಂತೆ ಅತ್ಯಂತ ಜಾಗರೂಕತೆಯಿಂದ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಈಗ ನಡೆದಿರುವ ಪರೀಕ್ಷೆಯಲ್ಲಿನ ಎಡವಟ್ಟುಗಳಿಗೆ ಕಾರಣರಾದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕಪ್ಪುಪಟ್ಟಿಗೆ ಸೇರಿಸಬೇಕು. ಮುಂದೆ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳ ಕರ್ತವ್ಯಕ್ಕೂ ಅವರು ನಿಯೋಜನೆಯಾಗದಂತೆ ಬ್ಲಾಕ್ ಲಿಸ್ಟ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೆಪಿಎಸ್‍ಸಿ ಪರೀಕ್ಷೆ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಪ್ರಶ್ನೆ ಆಗಿರುವುದರಿಂದ ಅವರ ಬದುಕಿನ ಜೊತೆ ಚೆಲ್ಲಾಟವಾಡದೆ, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪರೀಕ್ಷೆ ಸುವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೆಯುವಂತೆ ಎಚ್ಚರವಹಿಸಬೇಕು. ಕೆಪಿಎಸ್‍ಸಿ ಪರೀಕ್ಷೆ ಕಡೆಗೆ ಈಗ ಇಡೀ ದೇಶವೇ ಎದುರು ನೋಡುತ್ತಿದ್ದು, ಇದು ಈಗ ಕೇವಲ ಅಭ್ಯರ್ಥಿಗಳ ಪರೀಕ್ಷೆಯಾಗಿ ಉಳಿದಿಲ್ಲ. ಇದು ಇಡೀ ಕಾಂಗ್ರೆಸ್ ಸರಕಾರಕ್ಕೆ ಒಂದು ಸತ್ವ ಪರೀಕ್ಷೆಯಾಗಿದೆ ಎಂದು ಅಶೋಕ್ ಹೇಳಿದ್ದಾರೆ.