ಎಚ್‍ಐವಿ ಸೋಂಕಿನ ಪ್ರಮಾಣದಲ್ಲಿ ಇಳಿಕೆ : ಸಚಿವ ದಿನೇಶ್ ಗೂಂಡೂರಾವ್
ಬೆಂಗಳೂರು : ರಾಜ್ಯದಲ್ಲಿ 10 ವರ್ಷಗಳ ಹಿಂದೆ ಶೇ.1.77ರಷ್ಟಿದ್ದ ಎಚ್.ಐ.ವಿ ಸೋಂಕಿನ ಪ್ರಮಾಣ 2024ರ ಅಕ್ಟೋಬರ್ ಅಂತ್ಯಕ್ಕೆ ಅದರ ಪ್ರಮಾಣ 0.33ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಸೋಮವಾರ ನಗರದ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‍ನಲ್ಲಿ ಆರೋಗ್ಯ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್.ಐ.ವಿ ಸೋಂಕಿಗೆ ಹೆಚ್ಚು ಒಳಗಾಗುವವರು ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರವಾಸ ಮಾಡುವ ವಾಹನ ಚಾಲಕರು, ಲೈಂಗಿಕ ಕಾರ್ಯಕರ್ತರು ಹಾಗೂ ಮಾದಕ ವ್ಯಸನಿಗಳು. ವಾಹನ ಚಾಲಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅರಸ್ ಟ್ರಕ್ ಟರ್ಮಿಲ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಗರ್ಭಿಣಿಯರಲ್ಲಿ 10 ವರ್ಷಗಳ ಹಿಂದೆ ಶೇ.0.12 ಇದ್ದ ಎಚ್.ಐ.ವಿ 2024ರ ಅಕ್ಟೋಬರ್ ಅಂತ್ಯಕ್ಕೆ 0.03ಕ್ಕೆ ಇಳಿಕೆಯಾಗಿದೆ. ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಸೋಂಕಿತರಿಗೆ ಥೆರಪಿ ನೀಡುತ್ತಿದ್ದೇವೆ. ನಿಯಂತ್ರಣದಲ್ಲಿಡಲು ಔಷಧಿಗಳ ಕೊರತೆ ಇಲ್ಲ. ತಪಾಸಣೆ ಜೊತೆಗೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಎಚ್.ಐ.ವಿ. ಸೋಂಕು ಮೊದಲು ಬಂದಾಗ ಇಡೀ ವಿಶ್ವದಲ್ಲಿ ಕೋಟ್ಯಾಂತರ ಜನರ ಜೀವ ಬಲಿ ತೆಗೆದುಕೊಂಡಿದೆ. ಪಾಶ್ಚಿಮಾತ್ಯ ದೇಶದಿಂದ ಪ್ರಾರಂಭವಾಗಿ ಎಲ್ಲಾ ದೇಶಗಳಿಗೂ ಹರಡಿತು. ಇದು ಲೈಂಗಿಕ ಸಂಪರ್ಕದಿಂದ, ಇಂಜೆಕ್ಷನ್ ಪುನರ್ ಬಳಕೆಯಿಂದ ಹಾಗೂ ಸೋಂಕಿತ ಗರ್ಭಿಣಿಯರಿಂದ ಶಿಶುಗಳಿಗೂ ಹರಡುತ್ತದೆ. ಮೊದಲು ಎಚ್.ಐ.ವಿ ಬಂದಾಗ ಹೇಗೆ ಎದುರಿಸಬೇಕೆಂದು ಜನರಿಗೆ ಅರಿವಿರಲಿಲ್ಲ. ನಂತರ ಆಧುನಿಕ ವೈದ್ಯಕೀಯ ಸಂಶೋಧನೆಯಿಂದ ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸೋಂಕಿತರು ಜೀವನ ನಡೆಸಲು ಎಲ್ಲ ರೀತಿಯ ಔಷಧಿಗಳು ಈಗ ದೊರಕುತ್ತವೆ ಎಂದರು.
ಸೋಂಕಿತರಿಂದ ಹರಡುವಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು. ಎಚ್.ಐ.ವಿಯಿಂದ ಮರಣ ಹೊಂದುವುದನ್ನು ಶೂನ್ಯ ಪ್ರಮಾಣಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಸರಕಾರ ಈ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಳೆದ 6-7ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 2030ರ ವೇಳೆಗೆ ಎಚ್.ಐ.ವಿ ಸೋಂಕು ಹರಡುವುದನ್ನು ಶೂನ್ಯಕ್ಕೆ ತರುವ ಗುರಿ ಹೊಂದಲಾಗಿದೆ ಎಂದರು.
2024ರ ಎಪ್ರಿಲ್‍ನಿಂದ ಅಕ್ಟೋಬರ್‌ವರೆಗೆ 23.15 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, 7,720 ಜನರಲ್ಲಿ ಸೋಂಕು ಕಂಡು ಬಂದಿದೆ. ಇದೇ ಸಮಯದಲ್ಲಿ 7.11 ಲಕ್ಷ ಗರ್ಭಿಣಿಯರಿಗೆ ತಪಾಸಣೆ ಮಾಡಲಾಗಿದ್ದು, 247 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದು ಶೂನ್ಯಕ್ಕೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯ ಯೋಜನಾ ನಿರ್ದೇಶಕ ಎನ್.ಎಂ.ನಾಗರಾಜ, ಅಪರ ಯೋಜನಾ ನಿರ್ದೇಶಕಿ ಡಾ.ಉಮಾ ಬುಗ್ಗಿ, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
‘ರಾಜ್ಯದಲ್ಲಿ 433 ಆಪ್ತ ಸಮಾಲೋಚನಾ ಮತ್ತು ಎಚ್‍ಐವಿ ಪರೀಕ್ಷಾ ಕೇಂದ್ರಗಳಿವೆ. 2,592 ಸೌಲಭ್ಯಾಧಾರಿತ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿವೆ. ಅಲ್ಲಿ ನೀಡುತ್ತಿರುವ ಚಿಕಿತ್ಸೆ ಮತ್ತು ಥೆರಪಿಗಳಿಂದಾಗಿ ಎಚ್‍ಐವಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಇಷ್ಟಕ್ಕೇ ನಿಲ್ಲಿಸದೇ ರಾಜ್ಯದಲ್ಲಿ ಎಚ್‍ಐವಿ-ಏಡ್ಸ್ ಪತ್ತೆಯೇ ಇಲ್ಲದಂತೆ ಕೆಲಸ ಮಾಡಬೇಕು’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ